ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 18 ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆರಂಭಿಸಲು ತಯಾರಿ ನಡೆಸುತ್ತಿರುವುದು ಸಂತಸದ ಸಂಗತಿಯಾದರೆ, ಇದರ ಜತೆಯಲ್ಲೇ 64 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲು ಶಿಕ್ಷಣ ಇಲಾಖೆ ಪಟ್ಟಿ ಸಿದ್ಧಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ಹಾವೇರಿಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 18 ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆರಂಭಿಸಲು ತಯಾರಿ ನಡೆಸುತ್ತಿರುವುದು ಸಂತಸದ ಸಂಗತಿಯಾದರೆ, ಇದರ ಜತೆಯಲ್ಲೇ 64 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲು ಶಿಕ್ಷಣ ಇಲಾಖೆ ಪಟ್ಟಿ ಸಿದ್ಧಪಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಕುಸಿಯುತ್ತಿರುವ ಕಾರಣಕ್ಕೆ ಕೆಪಿಎಸ್ ಶಾಲೆಗಳನ್ನು ಸರ್ಕಾರ ಆರಂಭಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಕೆಪಿಎಸ್ ಶಾಲೆಯಲ್ಲಿ ವಿಲೀನಗೊಳಿಸಿ ಗುಣಮಟ್ಟದ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ.ಆದರೆ, ಇದೇ ಈಗ ಹಲವು ಕನ್ನಡ ಶಾಲೆಗಳು ಕಾಯಂ ಆಗಿ ಮುಚ್ಚವ ಭೀತಿಯನ್ನು ಎದುರಿಸುವಂತಾಗಿದೆ. ಶಾಲೆಗಳ ವಿಲೀನ ಕ್ರಮಕ್ಕೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಗ್ರಾಮಸ್ಥರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿಯೂ 18 ಕೆಪಿಎಸ್ ಶಾಲೆಗಳು ಆರಂಭವಾಗುತ್ತಿದ್ದು, ಈ ಶಾಲೆಗಳ ಸುತ್ತಮುತ್ತಲಿನ ಅರ್ಧ ಕಿಮೀನಿಂದ 5 ಕಿಮೀ ವ್ಯಾಪ್ತಿಯೊಳಗಿನ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡುತ್ತಿದ್ದಂತೆ, ಶಾಲೆಗಳು ವಿಲೀನವಾಗಲಿವೆ. 5 ಕಿ.ಮೀ.ನಿಂದ 12 ಕಿಮೀ ದೂರದಲ್ಲಿರುವ ಸರ್ಕಾರಿ ಶಾಲೆಗಳನ್ನು, ಕೆಪಿಎಸ್ ಜೊತೆ ವಿಲೀನ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಇದು ಮಕ್ಕಳಿಗೆ ಹೋಗಿ ಬರಲು ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಅಷ್ಟು ದೂರದ ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಆದರೂ ಕೆಲವು ಕಡೆಗಳಲ್ಲಿ 12 ಕಿಮೀ ದೂರವಿರುವ ಶಾಲೆಗಳನ್ನು ವಿಲೀನ ಮಾಡಲು ಒಪ್ಪಿಗೆ ಸಿಕ್ಕಿರುವುದಕ್ಕೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.ನಾಲ್ಕು ಶಾಲೆ ಮುಚ್ಚಿ: ಶಾಲೆಗಳ ವಿಲೀನವೆಂದರೆ, ಒಂದು ಶಾಲೆಯನ್ನು ಮುಚ್ಚಿ ಮತ್ತೊಂದು ಶಾಲೆ ತೆರೆಯುವುದಲ್ಲ. ಕೇವಲ ಆಡಳಿತಾತ್ಮಕ ಕೆಲಸಗಳು ಮಾತ್ರ ವಿಲೀನವಾಗುತ್ತವೆ. ಇದರಿಂದಾಗಿ ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿದೆ. ಇದು ಅಧಿಕಾರಿಗಳು ಹೇಳುವ ಸಿದ್ಧ ಉತ್ತರ. ಆದರೆ, ವಾಸ್ತವವಾಗಿ ಶಾಲೆ ಮುಚ್ಚಿಯೇ ಕೆಪಿಎಸ್‌ನಲ್ಲಿ ವಿಲೀನಗೊಳಿಸಬೇಕಾಗುತ್ತದೆ. ಇದು ಗ್ರಾಮೀಣ ಭಾಗದ ಪಾಲಕರಲ್ಲಿ ಆತಂಕ ಹುಟ್ಟಿಸಿದೆ. ಒಂದು ವೇಳೆ ಈಗ ಶಾಲೆ ಮುಚ್ಚಿದರೆ ಮುಂದೆ ತಮ್ಮೂರಿನ ಶಾಲೆ ಶಾಶ್ವತವಾಗಿ ಮುಚ್ಚುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದು ಶಾಲೆ ಆರಂಭಿಸಿ ನಾಲ್ಕು ಶಾಲೆ ಬಂದ್ ಮಾಡುವುದರೆ ಏನು ಪ್ರಯೋಜನ ಎಂದು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಕನ್ನಡ ಶಾಲೆಗಳನ್ನು ಉಳಿಸುವುದನ್ನು ಬಿಟ್ಟು ಈ ರೀತಿ ಮುಚ್ಚಲು ಹೊರಟಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಶಾಲೆಗಳ ಅವನತಿ?: ಕೆಪಿಎಸ್ ಶಾಲೆಗಳ ಜತೆಗೆ, ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳನ್ನು ವಿಲೀನ ಮಾಡುತ್ತಿರುವುದು ಕೆಲ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ವಿಲೀನ ಮಾಡಿದರೆ, ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಲಿವೆ. ಇದರಿಂದ ಕನ್ನಡ ಶಾಲೆಗಳ ಅವನತಿ ಆಗಲಿದೆ ಎಂದು ದೂರುತ್ತಿದ್ದಾರೆ.ಶಾಲೆಗಳನ್ನು ವಿಲೀನ ಮಾಡಿದರೆ, ಎಲ್ಲ ವಿದ್ಯಾರ್ಥಿಗಳು ಕೆಪಿಎಸ್ ಶಾಲೆಗೆ ಹೋಗುತ್ತಾರೆ. ಹಳ್ಳಿಯಲ್ಲಿರುವ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚಬೇಕಾಗುತ್ತದೆ. ಇದರಿಂದ ಕನ್ನಡ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತವೆ ಎಂದು ಪಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಿಗ್ಗಾಂವಿ ತಾಲೂಕಿನ ಸೂರಪಗಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು, ತಮ್ಮೂರಿನ ಶಾಲೆಗಳನ್ನು ಕೋಣನಕೇರಿಯ ಕೆಪಿಎಸ್ ಜತೆಗೆ ವಿಲೀನ ಮಾಡಬಾರದು ಎಂದು ಆಗ್ರಹಿಸಿದರು. ಹಿರೇಬೆಂಡಿಗೇರಿ ಶಾಲೆಗೆ ಬೆಳವಲಕೊಪ್ಪ, ಸುರುಪಗಟ್ಟಿ, ಬಳಗಲಿ, ಚಿಕ್ಕಬೆಂಡಿಗೇರಿ ಕನ್ನಡ, ಚಿಕ್ಕಬೆಂಡಿಗೇರಿ ಉರ್ದು, ಹಿರೇಬೆಂಡಿಗೇರಿ ಪ್ಲಾಟ್ ಸೇರಿ ಆರು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಕೋಣನಕೇರಿ ಶಾಲೆಗೆ ಭದ್ರಾಪುರ, ಮುಳ್ಕೇರಿ ಮತ್ತು ಶ್ಯಾಬಾಳ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು. ಒಟ್ಟಿನಲ್ಲಿ ಬರುವ ಶೈಕ್ಷಣಿಕ ಸಾಲಿನಲ್ಲೇ ಹಲವು ಕನ್ನಡ ಶಾಲೆಗಳು ಮುಚ್ಚುವ ಆತಂಕವಂತೂ ಎದುರಾಗಿದೆ.ಹಿರಿಯ ಅಧಿಕಾರಿಗಳ ನಿರ್ದೇಶನದಂತೆ, ಕೆಪಿಎಸ್ ಶಾಲೆಗಳ ಜತೆಯಲ್ಲಿ ವಿಲೀನ ಮಾಡಬಹುದಾದ ಸರ್ಕಾರಿ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ, ಪಟ್ಟಿಗೆ ಒಪ್ಪಿಗೆ ನೀಡಿದ ನಂತರವೇ ಶಾಲೆಗಳು ಆಡಳಿತಾತ್ಮಕವಾಗಿ ವಿಲೀನವಾಗಲಿವೆ. ವಿಲೀನ ಎಂದರೆ ಶಾಲೆಗಳನ್ನು ಮುಚ್ಚುವುದಲ್ಲ ಎಂದು ಡಿಡಿಪಿಐ ಮೋಹನ ದಂಡಿನ ಹೇಳಿದರು.