ಶಿಕ್ಷಣ ಇಲಾಖೆ ಸಿಬ್ಬಂದಿ ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಿ

| Published : May 23 2024, 01:09 AM IST

ಶಿಕ್ಷಣ ಇಲಾಖೆ ಸಿಬ್ಬಂದಿ ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಓದು-ಬರಹ, ಗಣಿತದ ಲೆಕ್ಕ ಬರದೇ ಇದ್ದವರಿಗೆ ಕಲಿಸುವುದು ಸವಾಲಾಗಿದೆ. ಕನ್ನಡ, ಇಂಗ್ಲಿಷ್‌, ಹಿಂದಿ ಭಾಷಾ ವಿಷಯಗಳಲ್ಲಿ ಅನುತ್ತೀರ್ಣರಾಗಲು ಕಾರಣ ಕಂಡುಕೊಳ್ಳಬೇಕು.

ಧಾರವಾಡ:

ಉತ್ತಮ ಫಲಿತಾಂಶ ನಮ್ಮ ಆತ್ಮಾವಲೋಕನ. ಆದ್ದರಿಂದ ಆತ್ಮಸಾಕ್ಷಿಯಿಂದ ಶಿಕ್ಷಕರು ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಹೇಳಿದರು.

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಬುಧವಾರ ಹುಬ್ಬಳ್ಳಿಯ ಬಿವಿಬಿ ಸಂಸ್ಥೆಯ ಬಯೋಟೆಕ್ ಹಾಲ್‌ನಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಫಲಿತಾಂಶದ ವಿಶ್ಲೇಷಣಾ ಸಭೆಯಲ್ಲಿ ಮಾತನಾಡಿದರು.

ಓದು-ಬರಹ, ಗಣಿತದ ಲೆಕ್ಕ ಬರದೇ ಇದ್ದವರಿಗೆ ಕಲಿಸುವುದು ಸವಾಲಾಗಿದೆ. ಕನ್ನಡ, ಇಂಗ್ಲಿಷ್‌, ಹಿಂದಿ ಭಾಷಾ ವಿಷಯಗಳಲ್ಲಿ ಅನುತ್ತೀರ್ಣರಾಗಲು ಕಾರಣ ಕಂಡುಕೊಳ್ಳಬೇಕು. ಪ್ರಸ್ತುತ ವರ್ಷ ದಾಖಲಾತಿ ಆಗುವ ವಿದ್ಯಾರ್ಥಿಗಳಿಗೆ ಬರವಣಿಗೆ, ಓದುವ ಕ್ರಮಗಳನ್ನು ಪ್ರಾರಂಭದಿಂದಲೇ ಕೈಗೊಳ್ಳಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಿ ಪ್ರತಿ ತಿಂಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಗತಿ ಅವಲೋಕಿಸಬೇಕು. ಮಕ್ಕಳು ನಿರಂತರವಾಗಿ ಗೈರು ಉಳಿಯದಂತೆ ವಿದ್ಯಾರ್ಥಿಗಳನ್ನು ಮನವೊಲಿಸಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಮುಖ್ಯಶಿಕ್ಷಕರು ಪ್ರತಿ ಮಗುವಿನ ಫಲಿತಾಂಶ ಸುಧಾರಣೆಗೆ ಕೈಗೊಂಡ ವಿವರಗಳನ್ನು ವಿಶ್ಲೇಷಣೆ ಮಾಡಿ ವಿವರ ಸಲ್ಲಿಸಬೇಕು. ಮುಂದಿನ ದಿನಗಳಲ್ಲಿ ಪರೀಕ್ಷಾ ಪದ್ಧತಿ ಇನ್ನೂ ಕಠಿಣವಾಗಿರುತ್ತದೆ. ಸಹಶಿಕ್ಷಕರಿಗೆ ಜವಾಬ್ದಾರಿ ಹಂಚಿಕೆ ಮಾಡಿ ಫಲಿತಾಂಶ ಹೆಚ್ಚಿಸಲು ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾಧಿಕಾರಿ ಎಸ್.ಎಂ. ಹುಡೇದಮನಿ ಮಾತನಾಡಿ, ತಾಲೂಕು ಹಂತದಿಂದ ತಂಡ ರಚಿಸಿ ಮಿಂಚಿನ ಸಂಚಾರ ಕೈಗೊಳ್ಳುವುದು ಹಾಗೂ ವಿಶೇಷ ದಾಖಲಾತಿ ಆಂದೋಲನ ಮಾಡಲಾಗುತ್ತಿದೆ. ಜೂ. 1ರಿಂದ ಜೂ. 30ರ ವರೆಗೆ ಸೇತುಬಂಧ ಕಾರ್ಯಕ್ರಮ ಆಯೋಜನೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಕ್ರಮಕೈಗೊಳ್ಳಬೇಕು ಎಂದರು.

ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿ ರವಿಕುಮಾರ ಬಾರಾಟ ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶದ ಮಾಹಿತಿ ನೀಡಿದರು. ಗ್ರಾಮೀಣ ಬಿಇಒ ಆರ್.ಆರ್. ಸದಲಗಿ, ಹುಬ್ಬಳ್ಳಿ ಬಿಇಒ ಉಮೇಶ ಬೊಮ್ಮಕ್ಕನವರ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಇದ್ದರು.