ಅನಧಿಕೃತ ಶಾಲೆಗಳ ಕಡಿವಾಣಕ್ಕೆಶಿಕ್ಷಣ ಇಲಾಖೆ ಕ್ರಮ

| Published : Apr 18 2025, 12:42 AM IST

ಅನಧಿಕೃತ ಶಾಲೆಗಳ ಕಡಿವಾಣಕ್ಕೆಶಿಕ್ಷಣ ಇಲಾಖೆ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅನುಮತಿ ಪಡೆಯದೆ ನಡೆಯುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ.

-ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಅನುಮತಿ ಪಡೆಯದೆ ನಡೆಯುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಶಾಲಾ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ಅನಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳ ವಿದ್ಯಾರ್ಥಿಗಳನ್ನು ಅಧಿಕೃತ ಶಾಲೆಗಳ ವಿದ್ಯಾರ್ಥಿ ಸಾಧನೆಯ ಟ್ರ್ಯಾಕಿಂಗ್ ವ್ಯವಸ್ಥೆ ತಂತ್ರಾಂಶ (ಎಸ್‌ಎಟಿಎಸ್)ದಲ್ಲಿ ಅಕ್ರಮವಾಗಿ ದಾಖಲಿಸಿಕೊಂಡಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಶಾಲಾ ಶಿಕ್ಷಣ ಇಲಾಖೆ ಖಡಕ್ ಸೂಚನೆ ಹೊರೆಡಿಸಿದೆ.

ಇತ್ತೀಚೆಗಷ್ಟೆ ರಾಮನಗರ ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತಮಂಡಳಿಗಳ ಒಕ್ಕೂಟ (ಉಸ್ಮಾರ್ಡ್) ಅನಧಿಕೃತ ಶಾಲೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಶಾಲಾ ಶಿಕ್ಷಣ ಇಲಾಖೆ ಮೌನ ವಹಿಸಿದೆ ಎಂದು ಆರೋಪ ಹೊರೆಸಿದ ಬೆನ್ನಲ್ಲೆ ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳ ವಿರುದ್ದ ಶಿಕ್ಷಣ ಇಲಾಖೆ ಕ್ರಮ ಜರುಗಿಸಲು ಮುಂದಾಗಿದೆ.

ಅನಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳ ವಿದ್ಯಾರ್ಥಿಗಳನ್ನು ಎಸ್‌ಎಟಿಎಸ್ ನಲ್ಲಿ ಅಕ್ರಮವಾಗಿ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ದಾಖಲಿಸುತ್ತಿರುವ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಡಕ್ ಸೂಚನೆ ಹೊರಡಿಸಿದ್ದಾರೆ.

ಅಂತಹ ಅಧಿಕೃತ ಶಾಲೆಗಳ ಮಾನ್ಯತೆಯನ್ನು ಯಾವ ಸೂಚನೆಯೂ ಇಲ್ಲದೆ ಹಿಂಪಡೆಯುವುದಾಗಿ ಹಾಗೂ ಅಂತಹ ಶಾಲೆಗಳ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯಿದೆ 1983ರ ಸೆಕ್ಷನ್- 30 ಮತ್ತು 31ರ ಪ್ರಕಾರ ಯಾವುದೇ ಖಾಸಗಿ ಶಾಲೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ/ನೋಂದಣಿ ಪಡೆಯುವುದು ಕಡ್ಡಾಯವಾಗಿದೆ. ಎಲ್‌ಕೆಜಿ, ಯುಕೆಜಿ ಹಾಗೂ 1ರಿಂದ 10ನೇ ತರಗತಿಗಳನ್ನು ನಡೆಸಲು ಅನುಮತಿ ಪಡೆಯುವುದು ಕಡ್ಡಾಯ. ಅನಮತಿ ಇಲ್ಲದೆ ನಡೆಯುವ ಶಾಲೆಗಳು ಹಾಗೂ ತರಗತಿಗಳನ್ನು ಅನಧಿಕೃತ ಎಂದು ವಾಖ್ಯಾನಿಸಲಾಗುತ್ತದೆ.

ಇಲಾಖಾ ಅನುಮತಿ ಇಲ್ಲದೆ ಉನ್ನತೀಕರಿಸಿದ ತರಗತಿಗಳು ಸಹ ನಿಯಮ ಬಾಹಿರ. ಉದಾಹರಣೆಗೆ 1ರಿಂದ 5ನೇ ತರಗತಿವರೆಗೆ ಮಾತ್ರ ಅನುಮತಿ ಪಡೆದು 6ರಿಂದ 10ನೇ ತರಗತಿಗಳನ್ನು ನಡೆಸಲು ಅವಕಾಶ ಇಲ್ಲ. ಇದು ನಿಯಮಬಾಹಿರ. ಶಾಲೆಗಳ ನೋಂದಣಿ ವೇಳೆ ಪ್ರತಿ ತರಗತಿಗೂ ತಲಾ ಒಂದು ವಿಭಾಗಕ್ಕೆ (ಸೆಕ್ಷನ್) ಮಾತ್ರ ಅನುಮತಿ ಪಡೆದು ತದನಂತರ ಹೆಚ್ಚುವರಿ ವಿಭಾಗಗಳನ್ನು ನಡೆಸುವುದು ಸಹ ಅನಧಿಕೃತವಾಗಿದೆ.

ಇಲಾಖೆಯ ಅನುಮತಿ ಇಲ್ಲದೆ ಐಸಿಎಸ್ಸಿ, ಸಿಬಿಎಸ್ಸಿ, ಕೇಂಬ್ರಿಡ್ಜ್ ಪಠ್ಯಕ್ರಮಗಳನ್ನು ಅನುಸರಿಸುತ್ತಿರುವುದು, ಇಲಾಖಾ ಅನುಮತಿ ಇಲ್ಲದೇ ಶಾಲೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರ ಮಾಡಿ ಶಾಲೆ ನಡೆಸುವುದು, ಒಂದೇ ಅವರಣದಲ್ಲಿ ರಾಜ್ಯ ಪಠ್ಯಕ್ರಮ ಹಾಗೂ ಇನ್ನಿತರೆ ಪಠ್ಯಕ್ರಮಗಳು ನಡೆಸುವುದು, ಪಡೆದ ಅನುಮತಿಗೆ ಬದಲಿಗೆ ಅನ್ಯ ಪಠ್ಯಕ್ರಮವನ್ನು ಬೋದಿಸುವುದು, ಮಾನ್ಯತೆ ನವೀಕರಣ ಪಡೆಯದೇ ಶಾಲೆ ನಡೆಸುವುದು, ಈಗಾಗಲೇ ನೋಂದಣಿಯನ್ನು ರದ್ದು ಪಡಿಸಿ ಮಾನ್ಯತೆಯನ್ನು ಹಿಂಪಡೆದಿದ್ದರೂ ಸಹ ಶಾಲೆಯನ್ನು ಅನಧಿಕೃತವಾಗಿ ನಡೆಸುತ್ತಿರುವುದು, ಭೌತಿಕವಾಗಿ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳದೇ ಎಸ್‌ಎಟಿಎಸ್ ತಂತ್ರಾಂಶದಲ್ಲಿ ಮಾತ್ರ ಮಕ್ಕಳನ್ನು ದಾಖಲಿಸಿಕೊಂಡಿರುವ ಪ್ರಕರಣಗಳನ್ನು ಅಕ್ರಮ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಸೂಚನಾ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಬಾಕ್ಸ್‌................

ಅನಧಿಕೃತ-ಅಧಿಕೃತ ಶಾಲೆಗಳ ನಡುವಿನ ಕಳ್ಳಾಟ!

ಯಾವುದೇ ಸರ್ಕಾರಿ, ಅನುದಾನ ರಹಿತ ಅಥವಾ ಅನುದಾನಿತ ಶಾಲೆಗಳು ಮಕ್ಕಳನ್ನು ದಾಖಲು ಮಾಡಿಕೊಂಡರೆ ಈ ಮಕ್ಕಳ ವಿವರವನ್ನು ಶಿಕ್ಷಣ ಇಲಾಖೆಯ ಎಸ್‌ಎಟಿಎಸ್ ತಂತ್ರಾಂಶದಲ್ಲಿ ನಮೂದಿಸಬೇಕು. ಅನುಮತಿ ಪಡೆಯದ ಶಾಲೆಗಳಿಗೆ ಈ ಸೌಲಭ್ಯ ಇರುವುದಿಲ್ಲ. ಆದರೂ ಕೆಲವು ಖಾಸಗಿ ಅನುದಾನ ರಹಿತ ಶಾಲೆಗಳು ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳಿಗೆ ಮಾತ್ರ ಪಡೆದಿದ್ದರೂ ಇಂತಹ ಶಾಲೆಗಳು 1ರಿಂದ 5 ನೇ ತರಗತಿಗಳಿಗೂ ಮಕ್ಕಳನ್ನು ದಾಖಲು ಮಾಡಿಕೊಂಡಿವೆ. ಆದರೆ ಈ ಮಕ್ಕಳನ್ನು ಮತ್ತೊಂದು ಅಧಿಕೃತ ಶಾಲೆಯ ಎಸ್‌ಎಟಿಎಸ್ ತಂತ್ರಾಂಶದಲ್ಲಿ ನಮೂದಿಸಲಾಗುತ್ತಿದೆ. ಇದು ಅನಧಿಕೃತ ಮತ್ತು ಅಧಿಕೃತ ಶಾಲೆಗಳ ನಡುವಿನ ಕಳ್ಳಾಟವಾಗಿದೆ.

ಭೌತಿಕವಾಗಿ ಮಕ್ಕಳು ಅನಧಿಕೃತ ಶಾಲೆಯಲ್ಲಿದ್ದರೆ, ಇವರ ವಿವರಗಳು ಅಧಿಕೃತವಾಗಿರುವ ಅನ್ಯ ಶಾಲೆಯ ಎಸ್‌ಎಟಿಎಸ್‌ನಲ್ಲಿರುತ್ತವೆ. ಈ ವಿಚಾರದಲ್ಲಿ ಅನೇಕ ದೂರುಗಳು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ದವು. ಇದೀಗ ಹೀಗೆ ಅಕ್ರಮ ಎಸಗಿರುವ ಅಧಿಕೃತ ಶಾಲೆಗಳ ವಿರುದ್ದವೂ ಕ್ರಮ ಕೈಗೊಳ್ಳುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

---------

ಯಾವುದೇ ರೀತಿಯಿಂದಲೂ ಶಾಲೆಗಳು ಅನಧಿಕೃತವಾಗಿ ನಡೆಯದಂತೆ ಸೂಚಿಸಲಾಗಿದೆ. ಒಂದು ವೇಳೆ ಇಲಾಖೆಯ ಯಾವುದೇ ಸ್ಥರದ ಅಧಿಕಾರಿಗಳ ಸ್ಥಳ ಪರಿಶೀಲನೆ ಸಂದರ್ಭದಲ್ಲಿ, ಅನಧಿಕೃತವಾಗಿ ಶಾಲೆ ನಡೆಸುತ್ತಿರುವುದು ದೃಢಪಟ್ಟಲ್ಲಿ ಅಥವಾ ದೂರುಗಳು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ 1983ರ ಕರ್ನಾಟಕ ಶಿಕ್ಷಣ ಕಾಯ್ದೆಯನ್ವಯ ಶಾಲೆಯ ಮಾನ್ಯತೆಯನ್ನು ಹಿಂಪಡೆದು ನೋಂದಣಿ ರದ್ದುಪಡಿಸಿ, ಶಾಲಾ ಆಡಳಿತ ಮಂಡಳಿ/ ಪ್ರಾಂಶುಪಾಲರ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

-ಸೋಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ, ರಾಮನಗರ

ಕೋಟ್ .................

ರಾಮನಗರ ಜಿಲ್ಲೆಯಲ್ಲಿ ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳ ವಿರುದ್ದ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು. ಅನುಮತಿ ಪಡೆಯದಿದ್ದರೂ 2025-26ನೇ ಸಾಲಿಗೆ ಇಂತಹ ಶಾಲೆಗಳು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಮುಂದಾಗಿವೆ. ಇದನ್ನು ಅಧಿಕಾರಿಗಳು ತಡೆಯಬೇಕು.

-ಪ್ರದೀಪ್, ಅಧ್ಯಕ್ಷರು, ಉಸ್ಮಾರ್ಡ್

17ಕೆಆರ್ ಎಂಎನ್ 3,4.ಜೆಪಿಜಿ

ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಶಾಲೆಗಳಿಗೆ ಹೊರಡಿಸಿರುವ ಸೂಚನಾ ಪತ್ರ.