ಶಿಕ್ಷಣ ಹೆಣ್ಣನ್ನು ಸಬಲೆಯನ್ನಾಗಿ ಮಾಡಿದೆ: ಸಾಹಿತಿ ಶೈಲಜಾ ಹಾಸನ

| Published : Mar 30 2024, 12:48 AM IST

ಸಾರಾಂಶ

ಹೆಣ್ಣಿನ ಬದುಕು ಬದಲಾಗುತ್ತಿದೆ. ಅವಳು ಹಿಂದಿನಂತಿಲ್ಲ. ಅನಾದಿ ಕಾಲದಿಂದ ಇದ್ದ ದಾಸ್ಯದ ಬದುಕು ಇಂದಿಲ್ಲ. ಶಿಕ್ಷಣ ಅವಳನ್ನು ಸಬಲೆಯನ್ನಾಗಿಸಿದೆ ಎಂದು ಸಾಹಿತಿ ಶೈಲಜಾ ಹಾಸನ ಹೇಳಿದರು. ಸನ್ಮಾನ ಮತ್ತು ಮಹಿಳಾ ದಿನಾಚರಣೆಯ ಅಂಗವಾಗಿ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾಸನ್ ಕ್ಲಬ್ ಲೇಡಿಸ್ ವಿಂಗ್‌ನಿಂದ ಮಹಿಳಾ ದಿನಾಚರಣೆ, ಸನ್ಮಾನ

ಕನ್ನಡಪ್ರಭ ವಾರ್ತೆ ಹಾಸನ

ಹೆಣ್ಣಿನ ಬದುಕು ಬದಲಾಗುತ್ತಿದೆ. ಅವಳು ಹಿಂದಿನಂತಿಲ್ಲ. ಅನಾದಿ ಕಾಲದಿಂದ ಇದ್ದ ದಾಸ್ಯದ ಬದುಕು ಇಂದಿಲ್ಲ. ಶಿಕ್ಷಣ ಅವಳನ್ನು ಸಬಲೆಯನ್ನಾಗಿಸಿದೆ. ಇಂದು ಆರ್ಥಿಕ ಸ್ವಾತಂತ್ರ್ಯದಿಂದಾಗಿ ನಿರ್ಧಾರವನ್ನು ಸ್ವತಃ ಅವಳೇ ಕೈಗೊಳ್ಳುವಂತೆ ಮಾಡಿದೆ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯದಿಂದಾಗಿ ಆತ್ಮವಿಶ್ವಾಸದಿಂದ ತಲೆ ಎತ್ತಿ ನಡೆಯುತ್ತಿದ್ದಾಳೆ. ಅಂದಿನ ಧಾರುಣ ಪರಿಸ್ಥಿತಿಯಿಂದ ಇಂದಿನ ಆಧುನಿಕ ಬದುಕಿಗೆ ತೆರೆದುಕೊಳ್ಳುತ್ತಿದ್ದಾಳೆ. ದಿನೇ ದಿನೇ ಅವಳ ಇರುವಿಕೆ ಸಮಾಜದಲ್ಲಿ ಮಹತ್ವವಾದ ಸ್ಥಾನವನ್ನು ಪಡೆಯುತ್ತಿದೆ ಎಂದು 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ಶೈಲಜಾ ಹಾಸನ ಹೇಳಿದರು .

ಹಾಸನ್ ಕ್ಲಬ್ ಲೇಡಿಸ್ ವಿಂಗ್ ವತಿಯಿಂದ ನಡೆದ ಸನ್ಮಾನ ಮತ್ತು ಮಹಿಳಾ ದಿನಾಚರಣೆಯ ಅಂಗವಾಗಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಬದಲಾದ ಕಾಲದಲ್ಲಿಯೂ ಹೆಣ್ಣಿನ ಮೇಲಿನ ದೌರ್ಜನ್ಯ ನಿಂತಿಲ್ಲ. ಘನತೆ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ಬಾಳಬೇಕಾದ ನಮ್ಮ ಸಹೋದರಿಯರು ನಿತ್ಯವೂ ಕೊಲೆ, ಅತ್ಯಾಚಾರ, ಆಸಿಡ್ ದಾಳಿ, ದೈಹಿಕ ಹಲ್ಲೆ, ಮರ್ಯಾದಾ ಹತ್ಯೆಗಳಂತಹ ಕ್ರೌರ್ಯಕ್ಕೆ ತುತ್ತಾಗುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ. ಸ್ತ್ರೀ ಭ್ರೂಣಹತ್ಯೆಯಂತಹ ಅನಾಗರಿಕ ಕೃತ್ಯಕ್ಕೆ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿ ಇದೆ. ಬಾಲ್ಯ ವಿವಾಹಗಳು ಸಾಮಾನ್ಯವಾಗಿವೆ. ನೊಂದ ಹೆಣ್ಣು ಮಕ್ಕಳಿಗೆ ಸಾಂತ್ವನ ನೀಡುವ ಕೆಲಸ ಸಮಾಜದಿಂದ, ಸರ್ಕಾರದಿಂದ ಆಗಬೇಕಾಗಿದೆ’ ಎಂದು ಹೇಳಿದರು.

ಡಾ. ರಂಗಲಕ್ಷ್ಮಿ ಮಾತನಾಡಿ, ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದ ನೆನಪಿಗಾಗಿ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೆವೆ. ಮಹಿಳೆಯರು ಮುಖ್ಯವಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು. ಉತ್ತಮ ಆಹಾರ, ವ್ಯಾಯಾಮ ,ನಡಿಗೆ ಇವನ್ನು ಅಳವಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಾಸನ್ ಕ್ಲಬ್ ಲೇಡಿಸ್ ವಿಂಗ್‌ನ ಅಧ್ಯಕ್ಷೆ ಶೋಭಾ ಮಹೇಶ್, ‘ಮಹಿಳೆಯರು ಇಂದಿಗೂ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಆಗುತ್ತಿರುವ ಶೋಷಣೆಗಳನ್ನು ದೂರಾಗಿಸಿ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿ ಕೊಡಬೇಕು. ಸಂಘಟನೆಗಳು ಜಾಗೃತಿ ಮೂಡಿಸುವ ಕೆಲಸ ಹಮ್ಮಿಕೊಳ್ಳಬೇಕು. ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ಹಾಗಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದರು.

ಕೊಡಗಿನ ಸಾಂಪ್ರದಾಯಿಕ ನೃತ್ಯದ ಮೂಲಕ ಹರಿಣಿ ಚೆನ್ನಕೇಶವ ಮತ್ತು ಹೇಮಾ ಲೋಹಿತ್ ಗಮನ ಸೆಳೆದರು. ದೀಪ್ತಿ ಪ್ರಸಾದ್, ಶುಭಾ ಸುನಿಲ್ ಗಾಯನ ನಡೆಸಿಕೊಟ್ಟರು.

ಡಾ.ಕವಿತಾ ಗಿರೀಶ್ ಸ್ವಾಗತಿಸಿ ನಿರೂಪಿಸಿದರು. ಉಷಾ ಮಹೇಶ್ ಮತ್ತು ಆಶಾದೇವಿ ಕುಮಾರ್ ಪ್ರಾರ್ಥಿಸಿದರು. ಉಷಾ ಮಹೇಶ್ ವಂದಿಸಿದರು. ಡಾ.ಭಾರತಿ ರಾಜಶೇಖರ್, ಮಾಲತಿ ಹೆಗಡೆ, ಮಂಗಳ ಚಂದ್ರಶೇಖರ, ಮಧುರ ಲೋಕೇಶ್, ಕೋಕಿಲ ಲೋಕೇಶ್, ರೂಪ ಆನಂದ, ಡಾ.ಮೈತ್ರಿ ವಿನಯ್, ರಾಧಾ ಮಂಜುನಾಥ ಉಪಸ್ಥಿತರಿದ್ದರು.

ಹಾಸನದ ಹಾಸನ್ ಕ್ಲಬ್ ಲೇಡಿಸ್ ವಿಂಗ್‌ನಿಂದ ನಡೆದ ಸನ್ಮಾನ ಮತ್ತು ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಶೈಲಜಾ ಮಾತನಾಡಿದರು.