ಅಪರಾಧಿಯಾಗದಿರಲು ವಿವೇಕ ಕೊಟ್ಟ ಶಿಕ್ಷಣ: ಡಾ.ರಾಜಪ್ಪ ದಳವಾಯಿ

| Published : May 10 2025, 01:06 AM IST

ಅಪರಾಧಿಯಾಗದಿರಲು ವಿವೇಕ ಕೊಟ್ಟ ಶಿಕ್ಷಣ: ಡಾ.ರಾಜಪ್ಪ ದಳವಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂತೆಯೇ ಮುಪ್ಪು. ಮಾನಸಿಕವಾಗಿ ಕುಗ್ಗಿದರೆ ಸಾವಿನ ಸಮೀಪ ಸರಿದಂತೆ. ಇದಕ್ಕಾಗಿ ಉತ್ಸಾಹದಿಂದ ಇರುವುದರ ಜೊತೆಗೆ ‌ಓದಿಗಿಂತ ದೊಡ್ಡ ಸುಖ, ಸಂಪತ್ತು ಬೇರೇನಿಲ್ಲ ಎಂಬ ಸತ್ಯ ಅರಿಯಿರಿ. ದೇವನೂರ ಮಹಾದೇವ ಅವರ ‘ಬಂಡೆಯ ಮೇಲೆ ಚಿಗುರೊಡೆಯಬೇಕು’ ಎಂಬ ಮಾತನ್ನು ಮನಗಾಣಿರಿ. ಶಿಕ್ಷೆಯ ಅವಧಿಯನ್ನು ಲೆಕ್ಕ ಹಾಕದೆ ಸಾಹಿತ್ಯ ಓದಿ, ಹೆಚ್ಚಿನ ಅಧ್ಯಯನ ಕೈಗೊಳ್ಳಿ.

ಕನ್ನಡಪ್ರಭ ವಾರ್ತೆ ಮೈಸೂರು

ನಾನು ಅಪರಾಧಿ ಆಗಬಾರದು ಎಂಬ ವಿವೇಕ ಕೊಟ್ಟಿದ್ದೇ ಶಿಕ್ಷಣ. ಇದಕ್ಕಾಗಿ ಜೈಲನ್ನು ಶಿಕ್ಷೆಯೆನ್ನದೆ ಶಿಕ್ಷಣವನ್ನಾಗಿ ಪರಿವರ್ತಿಸಿಕೊಳ್ಳಿ ಎಂದು ಸಾಹಿತಿ ಡಾ.ರಾಜಪ್ಪ ದಳವಾಯಿ ಸಲಹೆ ನೀಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾರಾಗೃಹ ಇಲಾಖೆ ಸಹಯೋಗದೊಂದಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಆಯೋಜಿಸಿದ್ದ ಮೂರು ದಿನಗಳ ಸಾಹಿತ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಅವರು ಶುಕ್ರವಾರ ಮಾತನಾಡಿದರು.

ಚಿಂತೆಯೇ ಮುಪ್ಪು. ಮಾನಸಿಕವಾಗಿ ಕುಗ್ಗಿದರೆ ಸಾವಿನ ಸಮೀಪ ಸರಿದಂತೆ. ಇದಕ್ಕಾಗಿ ಉತ್ಸಾಹದಿಂದ ಇರುವುದರ ಜೊತೆಗೆ ‌ಓದಿಗಿಂತ ದೊಡ್ಡ ಸುಖ, ಸಂಪತ್ತು ಬೇರೇನಿಲ್ಲ ಎಂಬ ಸತ್ಯ ಅರಿಯಿರಿ. ದೇವನೂರ ಮಹಾದೇವ ಅವರ ‘ಬಂಡೆಯ ಮೇಲೆ ಚಿಗುರೊಡೆಯಬೇಕು’ ಎಂಬ ಮಾತನ್ನು ಮನಗಾಣಿರಿ. ಶಿಕ್ಷೆಯ ಅವಧಿಯನ್ನು ಲೆಕ್ಕ ಹಾಕದೆ ಸಾಹಿತ್ಯ ಓದಿ, ಹೆಚ್ಚಿನ ಅಧ್ಯಯನ ಕೈಗೊಳ್ಳಿ ಎಂದು ಅವರು ಕಿವಿಮಾತು ಹೇಳಿದರು.

ಎಲ್ಲಿದ್ದೇವೆ ಎನ್ನುವುದು ಮುಖ್ಯವಲ್ಲ; ಹೇಗಿದ್ದೇವೆ ಎನ್ನುವುದು ಮುಖ್ಯ.‌‌ ಬಂಧನದಲ್ಲಿರುವವರು ಮುಕ್ತ ಮನಸ್ಸಿನಿಂದ ಇರುತ್ತಾರೆ. ಆದರೆ, ಬಂಧನದಲ್ಲಿರದೆ ಇರುವವರು ಮುಕ್ತರಾಗಿರುವುದಿಲ್ಲ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 60 ವರ್ಷಗಳ ಇತಿಹಾಸದಲ್ಲಿಯೇ ಜೈಲಿನಲ್ಲಿ ಸಾಹಿತ್ಯ ಕಮ್ಮಟ ಏರ್ಪಡಿಸಿದ್ದು ಶ್ಲಾಘನಿಯ ಎಂದರು.

ಕವಯಿತ್ರಿ ಡಾ. ಜಾಹಿದಾ ಮಾತನಾಡಿ, ಮಹಿಳಾ ಕೈದಿಗಳು ತಲೆತಗ್ಗಿಸಿ ಕೂಡದೆ ತಲೆಯೆತ್ತಿ ಕುಳಿತುಕೊಳ್ಳಿ. ಜೊತೆಗೆ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ಓದಿ ಎಂದರು.

ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಚಂದ್ರಕಿರಣ್ ಕುಳವಾಡಿ ಮಾತನಾಡಿ, ಮೈಸೂರಿನ ಜೈಲಿನಲ್ಲಿ ಶಿಸ್ತು, ಸ್ವಚ್ಛತೆ ಇದೆ. ವಿಶ್ವವಿದ್ಯಾಲಯದಲ್ಲಿ 31 ವರ್ಷಗಳವರೆಗೆ ಪಾಠ ಮಾಡಿದ್ದಕ್ಕಿಂತ ಮೂರು ದಿನಗಳ ಕಮ್ಮಟದಲ್ಲಿ ಮಾತನಾಡಿದ್ದು ಹೆಚ್ಚು ಎನಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್‌. ರಮೇಶ್ ಮಾತನಾಡಿ, ಬಂದಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಾಹಿತ್ಯ ಕಮ್ಮಟವು ವಿನೂತನವಾಗಿದೆ ಮತ್ತು ಯಶಸ್ವಿಯಾಗಿದೆ. ಮತ್ತೊಮ್ಮೆ ಅಪರಾಧ ಮಾಡಲ್ಲ, ಮತ್ತೊಮ್ಮೆ ಜೈಲಿಗೆ ಹೋಗಲ್ಲ, ತಿಳಿದೋ ತಿಳಿಯದೋ ತಪ್ಪು ಮಾಡಲ್ಲ ಎನ್ನುವ ದೃಢಸಂಕಲ್ಪ ಮಾಡಿ. ಇದಕ್ಕೆ ನೆರವಾಗುವ ಸಾಹಿತ್ಯ ಅಧ್ಯಯನ ಕೈಗೊಳ್ಳಿ. ಈ ಕಮ್ಮಟವು ಧನಾತ್ಮಕ ಶಕ್ತಿ ನೀಡಲಿ ಎಂದು ಆಶಿಸಿದರು.

ಸಹಾಯಕ ಅಧೀಕ್ಷಕರಾದ ಮೋಹನಕುಮಾರ್, ಎಂ. ದೀಪಾ, ಜೈಲರ್ ಗಳಾದ ಧರಣೇಶ್, ರೂಪವಾಣಿ, ಸಹಾಯಕ ಜೈಲರ್ ಶಿವಕುಮಾರ್ ಇದ್ದರು. ಜೈಲಿನ ಶಿಕ್ಷಕ ಪ್ರೇಮಕುಮಾರ್ ಸ್ವಾಗತಿಸಿದರು. ಜೈಲಿನ ವೀಕ್ಷಕ ಗುರುರಾಜ ಮರೋಲಿ ನಿರೂಪಿಸಿದರು.