ಸಾರಾಂಶ
ಹೊಸಪೇಟೆ: ಕಲ್ಪನೆಗಳನ್ನು ವಾಸ್ತವಕ್ಕೆ ಪರಿವರ್ತಿಸುವುದು ಶಿಕ್ಷಣದ ನಿಜವಾದ ಶಕ್ತಿ. ಇದು ಜ್ಞಾನ ಮತ್ತು ಕೌಶಲ್ಯಗಳಿಂದ ಮುಂದಿನ ಪೀಳಿಗೆಯನ್ನು ಸಬಲಗೊಳಿಸಲು ಮತ್ತು ಸಮಾಜವನ್ನು ಸುಧಾರಿಸಲು ನೆರವಾಗುತ್ತದೆ ಎಂದು ಮುನಿರಾಬಾದ್‌ನ ಇನ್‌ಸ್ಟಿಟ್ಯೂಶನ್ ಆಫ್ ಎಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಂ. ಶಶಿಧರ್ ಹೇಳಿದರು.
ನಗರದ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ''''''''ಪಿಎಂಶ್ರೀ ಯೋಜನೆ'''''''' ಅಡಿ ಆಯೋಜಿಸಲಾದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್.ಟಿ.ಇ.ಎಂ.) ಕುರಿತ ವಿಶೇಷ ಕಾರ್ಯಾಗಾರದಲ್ಲಿ ತಜ್ಞ ಸಂಪನ್ಮೂಲ ವ್ಯಕ್ತಿಯಾಗಿ ಗುರುವಾರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.ಸಮಾಜದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಹುಡುಕುವಲ್ಲಿ ಎಸ್.ಟಿ.ಇ.ಎಂ. ಕ್ಷೇತ್ರ ಮುಖ್ಯ ಪಾತ್ರ ವಹಿಸುತ್ತದೆ. ನಾವೀನ್ಯತೆ ಬೆಳೆಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಉದ್ದೀಪಿಸುತ್ತದೆ ಎಂದರು.
ನಿಮ್ಮ ಕುತೂಹಲವನ್ನು ಸದಾ ಜೀವಂತವಾಗಿರಿಸಿ, ಹೊಸ ಹಾದಿಗಳನ್ನು ಅನ್ವೇಷಿಸಿ ಮತ್ತು ಕಲಿಯುವಿಕೆಯನ್ನು ಎಂದಿಗೂ ನಿಲ್ಲಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಅವರು ಕಿವಿಮಾತು ಹೇಳಿದರು.ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಮನೋಹರ ಲಾಲ್ ಜೀಂಗರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾಗತಿಕ ವಿದ್ಯಮಾನಗಳ ಬಗೆಗೆ ಜಾಗೃತಿ ಮತ್ತು ಅರಿವು ಮೂಡಿಸಲು ಪಿಎಂಶ್ರೀ ಯೋಜನೆಯ ಅಡಿಯಲ್ಲಿ ವಿಶೇಷ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪಿಎಂಶ್ರೀ ಯೋಜನೆ ಅಡಿಯಲ್ಲಿ ಹೊಸಪೇಟೆಯ ಕೇಂದ್ರೀಯ ವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಡಾ.ಎಸ್.ಎಂ.ಶಶಿಧರ್ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು, ತಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದುಕೊಂಡರು.ಪಿಎಂಶ್ರೀ ಯೋಜನೆಯ ಸಂಯೋಜಕ ಬಿ.ಆರ್.ಎಸ್. ರೆಡ್ಡಿ, ಶಾಲೆಯ ಶಿಕ್ಷಕ ಎಸ್.ಕೆ. ಪ್ರಕಾಶ್, ವಿದ್ಯಾರ್ಥಿನಿಯರಾದ ಪ್ರಾರ್ಥನಾ, ಶ್ರೇಯಾ ಬಿ. ಯಾದವಾಡ ನಿರ್ವಹಿಸಿದರು.
ಹೊಸಪೇಟೆಯ ಪಿಎಂಶ್ರೀ ಕೇಂದ್ರೀಯ ವಿದ್ಯಾಲಯದಲ್ಲಿ ಪಿಎಂಶ್ರೀ ಯೋಜನೆ ಅಡಿ ಆಯೋಜಿಸಲಾದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕುರಿತ ವಿಶೇಷ ಕಾರ್ಯಾಗಾರ ನಡೆಯಿತು.