ಸಾರಾಂಶ
ಗಜೇಂದ್ರಗಡ: ಪಟ್ಟಣದ ಬೀದಿಬದಿಯ ವ್ಯಾಪಾರಿಗಳ ಸಮಸ್ಯೆ, ಕುಂದುಕೊರತೆಗಳ ಪರಿಹಾರ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ಕರ್ನಾಟಕ ರಾಜ್ಯ ಬೀದಿಬದಿಯ ವ್ಯಾಪಾರಿಗಳ ಸಂಘ ಸಿಐಟಿಯು ಸಂಯೋಜಿತ ತಾಲೂಕು ಸಮಿತಿ ನೇತೃತ್ವದಲ್ಲಿ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯಿತು.
ಪಟ್ಟಣದ ಸೇರಿದಂತೆ ಸುತ್ತಲಿನ ಗ್ರಾಮಗಳ ವ್ಯಾಪಾರಸ್ಥರಿಗೆ ಮಾರುಕಟ್ಟೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ನಡುವೆ ಬೀದಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ನೂರಾರು ಬೀದಿ ಬದಿ ವ್ಯಾಪಾರಸ್ಥರು ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಪಟ್ಟಣದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸದೇ ಸರ್ವಾಧಿಕಾರಿ ಧೋರಣೆ ಮೂಲಕ ಬೀದಿ ಬದಿ ವ್ಯಾಪಾರಿಗಳನ್ನು ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ ಅಧಿಕಾರಿಗಳ ನಡೆ ಖಂಡನಾರ್ಹ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮಾರುಕಟ್ಟೆ ಸ್ಥಳಾಂತರದಿಂದ ವ್ಯಾಪಾರಸ್ಥರ ಬದುಕು ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ಸೂಕ್ತ ಮಾರುಕಟ್ಟೆ ಒದಗಿಸಿ ನಮ್ಮ ಹಕ್ಕುಗಳ ರಕ್ಷಣೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಜೋಡು ರಸ್ತೆ ಸೇರಿದಂತೆ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ೨೦೦೪,೨೦೧೪ ಮತ್ತು ೨೦೧೯ರ ವ್ಯಾಪಾರಸ್ಥರ ರಕ್ಷಣಾ ಕಾಯ್ದೆಗಳ ಅಡಿಯಲ್ಲಿ ಅವಕಾಶ ನೀಡಬೇಕು. ಶಾಸಕರು, ಪುರಸಭೆ ಮುಖ್ಯಾಧಿಕಾರಿಗಳು, ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಎಲ್ಲ ವ್ಯಾಪಾರಸ್ಥರು ಮತ್ತು ನಮ್ಮ ಸಂಘಟನೆಯ ಜತೆಗೆ ಜಂಟಿ ಸಭೆ ನಡೆಸಿ ತಿರ್ಮಾನ ತೆಗೆದುಕೊಳ್ಳಬೇಕು. ತರಕಾರಿ ಮಾರುಕಟ್ಟೆಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಬೇಕು.ರಸ್ತೆ, ಬೀದಿ ಬದಿಯ ಹಣ್ಣು, ಎಗ್ ರೈಸ್, ಕಬ್ಬಿನ ಹಾಲು, ಬಟ್ಟೆ ವ್ಯಾಪಾರ, ಚಪ್ಪಲಿ, ಎಲೆ ಅಡಿಕೆ, ಪಾನಿಪುರಿ, ಹೂವು ಮಾರುವ ಎಲ್ಲ ವ್ಯಾಪಾರಸ್ಥರಿಗೆ ಬೀದಿಯಲ್ಲಿ ಎಳೆಯುವ ಗಾಡಿ ಮೇಲೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು, ಬೀದಿ ಬದಿಯ ವ್ಯಾಪಾರಿಗಳ ಕಾಯ್ದೆಯಂತೆ ಆರಕ್ಷಕರು ರಕ್ಷಣೆ ನೀಡಬೇಕುವಿನಃಹ ಕಿರುಕುಳ ನೀಡಬಾರದು. ಬೀದಿ ವ್ಯಾಪಾರಸ್ಥರ ನೋಂದಣಿ, ಗುರುತಿನ ಚೀಟಿ ವಿತರಣೆ, ವಿಮೆ, ಆರೋಗ್ಯ, ಸಾಲ ಸೌಲಭ್ಯ ಸೇರಿ ಇತರೆ ಸಾಮಾಜಿಕ ಭದ್ರತಾ ಯೋಜನೆ ಸೌಲಭ್ಯಗಳು ದೊರಕಬೇಕು ಸೇರಿ ಇತರ ಬೇಡಿಕೆ ಈಡೇರಿಸುವರೆಗೂ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರ ಅಹವಾಲು ಆಲಿಸಲು ಆಗಮಿಸಿದ ಉಪ ತಹಸೀಲ್ದಾರ್,ಕಂದಾಯ ನಿರೀಕ್ಷಕ ಹಾಗೂ ಪುರಸಭೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ, ಸೂಕ್ತ ಪರಿಹಾರ ಸಿಗುವವರೆಗೆ ಪ್ರತಿಭಟನೆ ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದರು.ಬಾಲು ರಾಠೋಡ, ಪೀರು ರಾಠೊಡ, ಗಣೇಶ ರಾಠೋಡ, ಶಾಮೀದ ದಿಂಡವಾಡ ಸೇರಿದಂತೆ ೩೦ಕ್ಕೂ ಅಧಿಕ ಬೀದಿ ಬದಿ ವ್ಯಾಪಾರಸ್ಥರು ಇದ್ದರು.