ಶಿಕ್ಷಣ ಕೇವಲ ಪದವಿ ಪಡೆಯುವ ಸಾಧನವಲ್ಲ. ಅದು ವ್ಯಕ್ತಿಯ ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಗೆ ಪೂರಕವಾದ ಪ್ರಬಲ ಅಸ್ತ್ರವಾಗಿದೆ ಎಂದು ಐಐಟಿ ಧಾರವಾಡದ ನಿರ್ದೇಶಕ ಹಾಗೂ ಕೆಎಲ್‌ಇ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಪ್ರೊ.ವೆಂಕಟಪ್ಪಯ್ಯ ದೇಸಾಯಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಿಕ್ಷಣ ಕೇವಲ ಪದವಿ ಪಡೆಯುವ ಸಾಧನವಲ್ಲ. ಅದು ವ್ಯಕ್ತಿಯ ಸಬಲೀಕರಣ ಮತ್ತು ಸಾಮಾಜಿಕ ಪರಿವರ್ತನೆಗೆ ಪೂರಕವಾದ ಪ್ರಬಲ ಅಸ್ತ್ರವಾಗಿದೆ ಎಂದು ಐಐಟಿ ಧಾರವಾಡದ ನಿರ್ದೇಶಕ ಹಾಗೂ ಕೆಎಲ್‌ಇ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಪ್ರೊ.ವೆಂಕಟಪ್ಪಯ್ಯ ದೇಸಾಯಿ ಹೇಳಿದರು.

ನಗರದ ಜೆಎನ್‌ಎಂಸಿ ಆವರಣದ ಕೆಎಲ್‌ಇ ಶತಮಾನೋತ್ಸವ ಸಭಾಗೃಹದಲ್ಲಿ ನಡೆದ ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಮೆಲುಕು ಹಾಕಿದರು. ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಬದುಕಿನ ರೂಪುಗೊಳ್ಳುವಿಕೆಯಲ್ಲಿ ಗುರುಗಳ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ತಮಗೆ ದಾರಿದೀಪವಾದ ಗುರುಗಳನ್ನು ಸ್ಮರಿಸುವುದು ಹೆಮ್ಮೆಯ ಸಂಗತಿ ಎಂದರು.

ಡಾ.ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಗೌರವ ಲಭಿಸಿರುವುದು ಸಂಸ್ಥೆಯ ಸಾಧನೆಗೆ ಸಂದ ಮನ್ನಣೆಯಾಗಿದೆ. ಅವರ ದೂರದೃಷ್ಟಿಯ ನಾಯಕತ್ವ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು. ಭಾರತದ ಶೈಕ್ಷಣಿಕ ಪರಂಪರೆಯನ್ನು ಆಧುನಿಕ ಜಗತ್ತಿನ ಹೊಸ ಪ್ರವೃತ್ತಿಗಳು ಮತ್ತು ತಂತ್ರಜ್ಞಾನಗಳೊಂದಿಗೆ ಬೆಸೆಯುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಮಿತ್ ಕೋರೆ ಮಾತನಾಡಿ, 1916ರಲ್ಲಿ ಏಳು ದೂರದೃಷ್ಟಿಯ ಶಿಕ್ಷಕರಿಂದ ಆರಂಭವಾದ ಸಂಸ್ಥೆ ಇಂದು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ 300ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ ಸೇವೆ ಸಲ್ಲಿಸುತ್ತಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮಹಾಂತೇಶ.ಎಸ್.ಕೌಜಲಗಿ ಮಾತನಾಡಿ, ಸಪ್ತಋಷಿಗಳ ತ್ಯಾಗ, ಸೇವೆ ಮತ್ತು ಸ್ವಾರ್ಥತ್ಯಾಗದಿಂದಾಗಿ ರೂಪುಗೊಂಡ ಕೆಎಲ್‌ಇ ಸಂಸ್ಥೆಯ ಶಿಕ್ಷಣ ದಾಸೋಹ ಶತಶತಮಾನಗಳ ಕಾಲ ಸಮಾಜಕ್ಕೆ ಬೆಳಕಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬೋಧಕರು ಮತ್ತು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ 62 ಚಿನ್ನದ ಪದಕ, 59 ರಜತ ಪದಕ ಹಾಗೂ ಎಂಟು ಟ್ರೋಫಿಗಳನ್ನು ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಡಾ.ಸುಜಾತಾ ಜಾಲಿ, ಡಾ.ಮೃತ್ಯುಂಜಯ ಬೆಲ್ಲದ ಹಾಗೂ ಏಳು ಮಂದಿ ಶುಶ್ರೂಷಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕೆಎಲ್‌ಇ ಸಂಸ್ಥೆಯ ಕಾರ್ಯದರ್ಶಿ ಡಾ.ಸುನೀಲ ಜಲಾಲಪುರೆ ಸ್ವಾಗತಿಸಿದರು. ಡಾ.ಪ್ರಭಾಕರ ಕೋರೆ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಕನ್ನಡಪ್ರಭ ವಾರ್ತೆ ಬೆಳಗಾವಿ