ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಕಾಡುಗೊಲ್ಲರ ಸಮುದಾಯ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಮುಂಚೂಣಿಗೆ ಬರಬೇಕೆಂದರೆ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ರೋಟರಿ ಭವನದಲ್ಲಿ ತಾಲೂಕು ಕಾಡುಗೊಲ್ಲರ ಸಂಘದ ವತಿಯಿಂದ ಕಾಡುಗೊಲ್ಲರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಅದರದ್ದೇ ಆದ ಮಹತ್ವವಿದ್ದು, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಮೂಲಕ ಭವಿಷ್ಯವನ್ನು ರೂಪಿಸಬೇಕು. ಈ ಸಮಾಜದ ಬಹುದಿನದ ಬೇಡಿಕೆಯಾದ ಎಸ್‌ಟಿ ಹೋರಾಟಕ್ಕೆ ನನ್ನ ಬೆಂಬಲವಿದೆ. ಮುಂದಿನ ದಿನಗಳಲ್ಲಿ ನಿಮ್ಮ ಅಪೇಕ್ಷೆಯಂತೆ ಕಂದಾಯ ಗ್ರಾಮಗಳನ್ನಾಗಿ ಮಾಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದಶಕಗಳಿಂದಲೂ ನಿಮ್ಮ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಲು ಪ್ರಯತ್ನಿಸಿದ್ದೇನೆ. ತಾಲೂಕಿನಲ್ಲಿ ಕಾಡುಗೊಲ್ಲರು ಸಂಘಟನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂಘಟನಾ ಶಕ್ತಿ ಇದ್ದರೆ ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದರು.
ಮಾಜಿ ಸಚಿವ ಬಿ.ಸಿ. ನಾಗೇಶ್ ಮಾತನಾಡಿ, ಈಗಿನ ಗೊಲ್ಲರಹಟ್ಟಿಗಳ ಸ್ಥಿತಿಗತಿಗಳು ಹಾಗೂ ಹಿಂದಿನ ಗೊಲ್ಲರಹಟ್ಟಿಗಳ ಸ್ಥಿತಿಗತಿಗಳಿಗೂ ಸ್ವಲ್ಪ ಸುಧಾರಣೆಯಾಗಿವೆ. ಮೂಲಸೌಕರ್ಯಗಳು ಸೇರಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿಯಾಗಬೇಕಿದೆ ಎಂದರು.ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಮಾತನಾಡಿ, ಆಧುನಿಕ ಭರಾಟೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕಾಡುಗೊಲ್ಲರು ತಮ್ಮ ವಿಶಿಷ್ಟ ಆಚರಣೆಗಳ ಮೂಲಕ ತಮ್ಮ ಅಸ್ಮಿತೆಯನ್ನು ಕಳೆದುಕೊಂಡಿಲ್ಲ. ಈ ಸಮಾಜದಲ್ಲಿರುವ ಅನೇಕ ಮೌಢ್ಯಗಳನ್ನು ಆತ್ಮಾವಲೋಕನ ಮಾಡಿಕೊಂಡು ನೀವೇ ಬದಲಿಸಿಕೊಳ್ಳುವುದು ಒಳಿತು ಎಂದರು.
ನೇತ್ರಾಧಿಕಾರಿ ಯುವರಾಜ್ ಯಾದವ್ ಮಾತನಾಡಿ, ಮೂಲಭೂತ ಸೌಕರ್ಯ ವಂಚಿತ ಕಾಡುಗೊಲ್ಲರಹಟ್ಟಿಯಿಂದ ಬಂದಂತಹ ಪ್ರತಿಭಾವಂತರನ್ನು ಗುರುತಿಸಿ, ಸನ್ಮಾನಿಸುವ ಮೂಲಕ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಪ್ರೋತ್ಸಾಹ ತುಂಬಿದಂತಾಗಲಿದೆ. ಯುವಕರು ದ್ವೇಷ, ಅಸೂಯೆ ಬಿಟ್ಟು ಸಹೋದರತ್ವದಿಂದ ಹಟ್ಟಿಗಳಲ್ಲಿ ಜೀವನ ನಡೆಸಿ ದುಶ್ಚಟ, ಬಾಲ್ಯವಿವಾಹ, ಮೂಢನಂಬಿಕೆಗಳ ಅರಿವು ಮೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕೆಂದರು.ಅಧ್ಯಕ್ಷತೆಯನ್ನು ಕಾಡುಗೊಲ್ಲ ಸಂಘದ ತಾ. ಅಧ್ಯಕ್ಷ ಬಾಲರಾಜ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಕೊಟ್ಟಿಗೇಹಳ್ಳಿ ಶಂಕಪ್ಪ, ಟಿ.ಎನ್. ಪ್ರಕಾಶ್, ಮಲ್ಲಿಕಾರ್ಜುನ್, ಮಂಜು, ರವಿ, ಶಂಕರ್ ಜಯಣ್ಣ, ಶಶಿ, ಹರೀಶ್, ಮಹೇಂದ್ರ, ಶಿವಕುಮಾರ್, ಗಂಗಾಧರ್, ಅಬಕಾರಿ ಇಲಾಖೆಯ ಪ್ರಸನ್ನಕುಮಾರ್ ಮತ್ತಿತರರಿದ್ದರು.
;Resize=(128,128))
;Resize=(128,128))