ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಹೆತ್ತವರನ್ನು ಅನಾಥಾಶ್ರಮಕ್ಕೆ ಸೇರಿಸುವ ಶಿಕ್ಷಣ ನಮಗೆ ಬೇಡ. ವಿಜ್ಞಾನ ಶಿಕ್ಷಣ ಮಕ್ಕಳನ್ನು ಸುಜ್ಞಾನಿಗಳನ್ನಾಗಿಸಬೇಕು. ಪರಿಸರವನ್ನು ಹಾಳು ಮಾಡಿದಲ್ಲಿ ದೇವರು ಕ್ಷಮಿಸಿಯಾರು. ಆದರೆ ಪ್ರಕೃತಿ ಕ್ಷಮಿಸುವುದಿಲ್ಲ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಉಳಿಸಲು ಶಿಕ್ಷಣ ಪ್ರೇರಣೆ ನೀಡಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ಹೇಳಿದರು.ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪದವಿ ಪೂರ್ವ ಕಾಲೇಜಿನಲ್ಲಿ ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್ ವತಿಯಿಂದ ನಿರ್ಮಾಣಗೊಂಡ ೫೧ ಬಗೆಯ ವಿಜ್ಞಾನ ಮಾದರಿಗಳನ್ನೊಳಗೊಂಡ ‘ವಿಜ್ಞಾನವನ ಶಕ್ತಿ ೨.೦’ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಟೀಲು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ವತಿಯಿಂದ ನಿವೃತ್ತ ಪ್ರಾಂಶುಪಾಲ ಡಾ. ಕೃಷ್ಣ ಕಾಂಚನ್ ಹಾಗೂ ನಿವೃತ್ತ ಉಪನ್ಯಾಸಕ ನಾಗೇಶ್ ರಾವ್ ಅವರನ್ನು ಗೌರವಿಸಲಾಯಿತು.ಕಟೀಲು ಕನ್ನಡ ಶಾಲೆಯ ಎಂಟನೇ ತರಗತಿಗೆ ಸೇರುವ ಮಕ್ಕಳ ಶಿಕ್ಷಣ ಶುಲ್ಕ ಹಾಗೂ 20 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್ ವಿತರಿಸಲಾಯಿತು. ಕಟೀಲು ದೇಗುಲದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಅನಂತ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಅರ್ಚಕ ರಾಮದಾಸ ಭಟ್, ಹಳೆ ವಿದ್ಯಾರ್ಥಿ ಸಂಘದ ಲೋಕಯ್ಯ ಸಾಲ್ಯಾನ್, ಕರ್ನಾಟಕ ಲ್ಯಾಬೊರೇಟರಿ ಇಕ್ವಿಪ್‌ಮೆಂಟ್ ಸಪ್ಲಾಯಿಸ್‌ನ ಧರಣೇಶ್ ಆಚಾರ್ಯ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ವಿಜಯ್ ವಿ. ಕುಸುಮಾವತಿ, ಚಂದ್ರಶೇಖರ ಭಟ್, ಗಿರೀಶ್ ತಂತ್ರಿ, ಸರೋಜಿನಿ, ರಾಜಶೇಖರ್ ಮತ್ತಿತರರಿದ್ದರು.ಶ್ರೀವತ್ಸ ಭಟ್ ಸ್ವಾಗತಿಸಿದರು. ರಾಜಶೇಖರ್ ನಿರೂಪಿಸಿದರು.