ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಡುವೆ ಅಂತಃಕರಣವನ್ನು ಮರೆಯುತ್ತಿದ್ದೇವೆ. ಅಂತಃಕರಣವನ್ನು ಇಟ್ಟುಕೊಂಡರೆ ಮಾತ್ರ ನಮ್ಮ ಶಿಕ್ಷಣಕ್ಕೆ ಬೆಲೆ ಇದೆ.

ಮುಂಡರಗಿ: ಇಲ್ಲಿನ ಅನ್ನದಾನೀಶ್ವರ ಮಠದ ಅನ್ನದಾನೀಶ್ವರ ವಿದ್ಯಾ ಸಮಿತಿ ಮೂಲಕ ಕಳೆದ ಒಂದು ಶತಮಾನದಿಂದ ನಾಡಿನಾದ್ಯಂತ ವಿವಿಧ ಶಾಲಾ- ಕಾಲೇಜುಗಳನ್ನು ತೆರೆದು ಯಾವುದೇ ಜಾತಿ, ಭೇದವಿಲ್ಲದೇ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡುವ ಕಾರ್ಯವನ್ನು ಡಾ. ಅನ್ನದಾನೀಶ್ವರ ಸ್ವಾಮೀಜಿಯವರು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.

ಪಟ್ಟಣದ ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಕಾರ್ಯಕ್ರಮ ಅಂಗವಾಗಿ ಭಾನುವಾರ ಬೆಳಗ್ಗೆ ಜರುಗಿದ ವಿಶೇಷ ಉಪನ್ಯಾಸ, ಹಿರಿಯ ವಿದ್ಯಾರ್ಥಿಗಳ ಸಮಾವೇಶ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ನಡುವೆ ಅಂತಃಕರಣವನ್ನು ಮರೆಯುತ್ತಿದ್ದೇವೆ. ಅಂತಃಕರಣವನ್ನು ಇಟ್ಟುಕೊಂಡರೆ ಮಾತ್ರ ನಮ್ಮ ಶಿಕ್ಷಣಕ್ಕೆ ಬೆಲೆ ಇದೆ. ಅಂತಃಕರಣ ಬಿಟ್ಟರೆ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ. ಈ ಮಾನವೀಯತೆ ಗುಣಗಳು ನಮ್ಮ ರಕ್ತದಲ್ಲಿ ಬರಬೇಕಾದರೆ ಸಂಸ್ಕೃತಿ, ಸಂಸ್ಕಾರ, ಪರಂಪರೆ ಬಹಳ ಮುಖ್ಯ ಎಂದರು. ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಮುಂಡರಗಿ ಅನ್ನದಾನೀಶ್ವರ ವಿದ್ಯಾ ಸಮೀತಿ ಕಳೆದ 100 ವರ್ಷದಿಂದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಪಟ್ಟಣದಲ್ಲಿನ ಅನೇಕ ಸರ್ಕಾರಿ ಶಾಲಾ- ಕಾಲೇಜುಗಳಿಗೆ, ಸರ್ಕಾರಿ ಆಸ್ಪತ್ರೆಗೆ ಶ್ರೀಗಳು ತಮ್ಮ ಮಠದ ಜಮೀನನ್ನು ದಾನವಾಗಿ ನೀಡುವ ಮೂಲಕ ನಮ್ಮ ಮುಂಡರಗಿ ತಾಲೂಕಿನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದಾರೆ ಎಂದರು.

ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಮಾತನಾಡಿ, ಅನ್ನದಾನೀಶ್ವರ ಸ್ವಾಮೀಜಿಯವರು ಈ ಭಾಗದ ಜನತೆಗೆ ಶಿಕ್ಷಣ ನೀಡಲು ಹೋರಾಡಿದ್ದಾರೆ. ಸಂಸ್ಥೆಯಲ್ಲಿ ಜಾತಿ, ಮತ, ಪಂಥವಿಲ್ಲದೇ 3- 4 ಜಿಲ್ಲೆಗಳ ಮಕ್ಕಳು ಅಕ್ಷರಾಭ್ಯಾಸ ಮಾಡುವ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ ಎಂದರು.

ಕಿರ್ಲೋಸ್ಕರ್ ಕಂಪನಿಯ ಎಂಡಿ ಆರ್.ವಿ. ಗುಮಾಸ್ತೆ ಮಾತನಾಡಿ, ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ತಂದೆ- ತಾಯಂದಿರ ಮಾತನ್ನು ಕೇಳಬೇಕು. ಅವರ‌ ಅನುಭವದ ನುಡಿಗಳನ್ಬು ಆಲಿಸಬೇಕು ಎಂದರು.

ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಇಂದಿನ ದಿನಮಾಕಾಲದಲ್ಲಿ ವಿದ್ಯಾ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದು ಅಷ್ಟು ಸುಲಭದ ಮಾತಲ್ಲ. ಸಂಸ್ಥೆಯ ಬೆಳವಣಿಗೆಗೆ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಡಾ. ಚಂದ್ರು ಲಮಾಣಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸೇರಿದಂತೆ ಎಲ್ಲರೂ ನಿರಂತರವಾಗಿ ತನು, ಮನ, ಧನದಿಂದ ಸಹಾಯ ಮಾಡುತ್ತಾ ಬಂದಿದ್ದು, ಸಂಸದ ಬಸವರಾಜ ಬೊಮ್ಮಾಯಿಯವರು ₹25 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ನಮ್ಮ ಆಡಳಿತಾಧಿಕಾರಿಗಳು ಅದಕ್ಕೆ ಬೇಕಾದ ಪತ್ರವ್ಯವಹಾರ ಮಾಡಬೇಕು ಎಂದರು.

ಗದಗ- ವಿಜಯಪುರ ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ನಿರ್ಭಯಾನಂದ ಸರಸ್ವತಿ ಸ್ವಾಮಿಜಿ ವಿಶೇಷ ಉಪನ್ಯಾಸ ನೀಡಿದರು. ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ, ಗಣ್ಯರಿಗೆ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಸ್.ಎಸ್. ಪಾಟೀಲ, ‍ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಸಂಸ್ಥೆಯ ಗೌ. ಕಾರ್ಯದರ್ಶಿ ಆರ್.ಆರ್. ಹೆಗಡಾಳ, ಜ.ಅ.ಸಂ.ಪ. ಪೂರ್ವ ಮಹಾವಿದ್ಯಾಲಯ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟಿ, ಆರ್.ಎಲ್, ಪೊಲೀಸಪಾಟೀಲ, ಸಿ.ಎಸ್. ಅರಸನಾಳ, ಶಿವಪ್ಪ ಅಂಕದ, ಡಾ. ಅನ್ನದಾನಿ ಮೇಟಿ, ಎ.ಕೆ. ದಾಶ್ಯಾಳ, ಮಹಾವೀರ ಮಂಟಗಣಿ, ಎ.ಬಿ. ಹಿರೇಮಠ, ವಿ.ಸಿ. ಕೊಪ್ಪಳ, ಡಿ.ಡಿ. ಮೋರನಾಳ, ಆನಂದಗೌಡ ಪಾಟೀಲ, ಡಾ. ಪ್ರಕಾಶ ಹೊಸಮನಿ, ನಾಗೇಶ ಹುಬ್ಬಳ್ಳಿ, ಡಾ. ವೀರೇಶ, ಪ್ರತಿಭಾ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಡಾ. ಬಿ.ಜಿ. ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ರಿತ್ತಿ, ದೀಪುಶ್ರೀ ಕಣವಿ ನಿರೂಪಿಸಿದರು.