ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆಯ್ಕೆಗೊಂಡಿರುವ ಐದು ತಾಲೂಕುಗಳಲ್ಲಿ ಕಂಪ್ಲಿ ತಾಲೂಕು ಕೂಡ ಒಂದಾಗಿದ್ದು,
ಕಂಪ್ಲಿ: ಶಿಕ್ಷಣವೇ ಸಮಗ್ರ ಅಭಿವೃದ್ಧಿಗೆ ಬುನಾದಿಯಾಗಿದ್ದು, ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಒದಗಿಸುವಲ್ಲಿ ಪೋಷಕರು ಮತ್ತು ಸಮಾಜದ ಎಲ್ಲ ವರ್ಗಗಳು ಮುಂದಾಗಬೇಕು ಎಂದು ಶಾಸಕ ಜೆ.ಎನ್.ಗಣೇಶ ಹೇಳಿದರು.
ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನ ಪಕ್ಕದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2025-26ನೇ ಸಾಲಿನ ಅನುದಾನದಲ್ಲಿ ಶಾದಿಮಹಲ್ ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳ ವೃದ್ಧಿಯೂ ಅಗತ್ಯವಾಗಿದ್ದು, ಸರ್ಕಾರವು ಅಲ್ಪಸಂಖ್ಯಾತ ಸಮುದಾಯದ ಸೌಲಭ್ಯಗಳನ್ನು ಹೆಚ್ಚಿಸಲು ಬದ್ಧವಾಗಿದೆ. ಶಾದಿಮಹಲ್ ನಿರ್ಮಾಣವು ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಹತ್ವದ ಕೇಂದ್ರವಾಗಲಿದೆ. ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸುಗಮವಾಗಿ ಆಯೋಜಿಸಲು ಇದು ಅನುಕೂಲವಾಗಲಿದೆ. ತಲಾ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಂಪ್ಲಿ, ಎಮ್ಮಿಗನೂರು, ಕಗ್ಗಲ್ ಹಾಗೂ ಯಲ್ಲಾಪುರ ಪ್ರದೇಶಗಳಲ್ಲಿ ಶಾದಿಮಹಲ್ ಕಟ್ಟಡಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಜೊತೆಗೆ ತಲಾ 33 ಲಕ್ಷ ರೂಪಾಯಿಗಳ ಅನುದಾನದಲ್ಲಿ ಕ್ಷೇತ್ರದ ಎಂಟು ಖಬರ್‌ಸ್ತಾನ್‌ಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಕೈಗೊಳ್ಳಲಾಗುವುದು ಎಂದು ಹೇಳಿದರು.ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆಯ್ಕೆಗೊಂಡಿರುವ ಐದು ತಾಲೂಕುಗಳಲ್ಲಿ ಕಂಪ್ಲಿ ತಾಲೂಕು ಕೂಡ ಒಂದಾಗಿದ್ದು, ಇದರ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರುಗಳಾದ ಸೈಯ್ಯದ್ ಷಾಹ್ ಖಾಜಾ ಮೊಹೀದ್ದೀನ್ ಖಾದ್ರಿ, ಸೈಯ್ಯದ್ ಷಾಹ್ ಡಾ. ನೂರ್ ಅಹ್ಮದ್ ಖಾದ್ರಿ, ಸೈಯ್ಯದ್ ಷಾಹ್ ಕರಿಮುಲ್ಲಾ ಖಾದ್ರಿ ಭಾಗವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಕ್ಷೇತ್ರ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಎಸ್.ರಿಯಾಜ್ ಅಹ್ಮದ್, ಪ್ರಮುಖರಾದ ಎನ್. ಹಬೀಬ್ ರೆಹಮಾನ್, ಭಟ್ಟ ಪ್ರಸಾದ್, ಕೆ.ಎಸ್. ಚಾಂದ್ ಬಾಷ, ಕೆ.ಮಸ್ತಾನ್, ಟಿ.ಜಾಫರ್, ಎಂ.ಉಸ್ಮಾನ್, ಅಕ್ಕಿ ಜಿಲಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.