ಹನುಮಸಾಗರ: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಶಿಕ್ಷಣವೇ ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗಿದೆ ಎಂದು ಪಪಂ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹೇಳಿದರು.

ಪಟ್ಟಣದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿಯರಿಗೆ ಸ್ವಾಗತ, ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ವಿವಿಧ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು, ಪರಿಶ್ರಮ ಮತ್ತು ಗುರಿಯೊಂದಿಗೆ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಪಪಂಯಿಂದ ಶಾಲೆಯ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಸೇರಿದಂತೆ ಯಾವುದೇ ಕೆಲಸಗಳಿದ್ದರೂ ಸಾಧ್ಯವಾದ ಮಟ್ಟಿಗೆ ನೆರವು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಸ್ವಚ್ಛತೆ ಮತ್ತು ಸಾಮಾಜಿಕ ಮೌಲ್ಯ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ದೇಸಾಯಿ ಮಾತನಾಡಿ, ಹೊಸದಾಗಿ ಸೇರ್ಪಡೆಯಾದ 6ನೇ ತರಗತಿ ವಿದ್ಯಾರ್ಥಿನಿಯರನ್ನು ಆತ್ಮೀಯವಾಗಿ ಸ್ವಾಗತಿಸಿ,ಶಾಲೆಯಲ್ಲಿ ದೊರೆಯುವ ಶೈಕ್ಷಣಿಕ ಸೌಲಭ್ಯ ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ವಿವಿಧ ಶೈಕ್ಷಣಿಕ ಪರಿಕರ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಭೀಮವ್ವ ಮುದಕ್ಕಪ್ಪ ದ್ಯಾವಣ್ಣನವರ,ಉಪಾಧ್ಯಕ್ಷೆ ಅಕ್ಕಮ್ಮ ಪಟ್ಟಣಶೆಟ್ಟಿ, ಶಿಕ್ಷಕಿ ರುಬಿಯಾಬೇಗಂ, ಶಾಲಾ ಸಿಬ್ಬಂದಿ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಹಾಗೂ ವಿದ್ಯಾರ್ಥಿನಿಯರು ಇತರರು ಇದ್ದರು.