ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಗುರುನಾಥ ಅಭಿಮತ

ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು

ಡಾ.ಬಿ.ಆರ್.ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿ ಮಾತ್ರವಲ್ಲ, ಜ್ಞಾನ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ಪ್ರತೀಕವಾಗಿದ್ದಾರೆ. ತಮ್ಮ ಜೀವನದ ಯಶಸ್ಸಿನ ಪ್ರಮುಖ ಶಕ್ತಿಯಾಗಿ ಓದಿನ ಮಹತ್ವವನ್ನು ಗುರುತಿಸಿದ್ದರು. ಆದ್ದರಿಂದಲೇ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿ ಬೆಳೆಸುವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಗುರುನಾಥ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಸಿದ್ದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಸಾವಿರಾರು ಪುಸ್ತಕಗಳನ್ನು ಅಧ್ಯಯನ ಮಾಡಿ ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಅವರ ಜೀವನವು ಪ್ರತಿಯೊಬ್ಬ ವಿದ್ಯಾರ್ಥಿಗೆ ಸ್ಫೂರ್ತಿದಾಯಕವಾಗಿದೆ. ಪುಸ್ತಕ ಓದುವುದರಿಂದ ವ್ಯಕ್ತಿತ್ವ ವಿಕಸನ, ಚಿಂತನಶಕ್ತಿ ಮತ್ತು ಸಾಮಾಜಿಕ ಅರಿವು ಹೆಚ್ಚುತ್ತದೆ ಎಂಬುದನ್ನು ಅವರ ಬದುಕು ನಮಗೆ ತಿಳಿಸುತ್ತದೆ.

ಅಂಬೇಡ್ಕರ್ ಅವರ ಚಿಂತನೆಗಳು ಅವರ ಹೋರಾಟಗಳು ಹಾಗೂ ಇಂದಿನ ನವ ಸಮಾಜದಲ್ಲಿ ಅವುಗಳ ಪ್ರಸ್ತುತತೆಯ ಕುರಿತು ಬೆಳಕು ಚೆಲ್ಲಲಿವೆ. ವಿದ್ಯಾರ್ಥಿಗಳು ಅಂಬೇಡ್ಕರರ ಚಿಂತನೆ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಂಡು ಬಾಳಬೇಕೆಂದು ತಿಳಿಸಿದರು.

ಪೊಲೀಸ್ ಉಪ ನಿರೀಕ್ಷಕ ಮಹೇಶ್ ಹೊಸಪೇಟೆ, ಎಸ್.ಪರಮೇಶ್ ಮೌರ್ಯ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಬಿ.ಗೋವಿಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಭಂಗಿ ನಾಗರಾಜ್, ಕಲಾವಿಧ ಅಮುಕುಂದಿ ಗಂಗಾಧರ್,ಸಂಪನ್ಮೂಲ ವ್ಯಕ್ತಿ ವಿಜಯ್ ಕುಮಾರ್, ನಾಗಸಮುದ್ರ ಮರಿಸ್ವಾಮಿ ಇದ್ದರು.