ಕುಷ್ಟಗಿ: ಶಿಕ್ಷಣವು ವ್ಯಕ್ತಿಯ ಜೀವನ ರೂಪಿಸುವ ಶಕ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಗುರಿ ಹೊಂದಿ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಪಟ್ಟಣದ ಕರೀಂ ಕಾಲನಿಯ ಬಿಬಿ ಫಾತಿಮಾ ಶಾದಿ ಮಹಲ್ ನಲ್ಲಿ ನಡೆದ ಅಲ್ಪಸಂಖ್ಯಾತ ಮುಸ್ಲಿಂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಪಾಠ, ಪುಸ್ತಕಗಳಿಗೆ ಸೀಮಿತವಾಗದೆ ಉತ್ತಮ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಣದಿಂದ ಮಾತ್ರ ಮನುಷ್ಯನ ಸರ್ವತೋಮುಖ ವ್ಯಕ್ತಿತ್ವ ಬೆಳವಣಿಗೆ ಸಾಧ್ಯ, ಪ್ರತಿಯೊಬ್ಬರು ಬದುಕು ಬದಲಾಗಲು ಶಿಕ್ಷಣ ಅವಶ್ಯ, ಪ್ರತಿಯೊಂದು ಸಮಾಜ ಕಾಡುತ್ತಿರುವ ಸಾಮಾಜಿಕ ರೋಗಗಳಾದ ಮೌಢ್ಯ,ಅಂಧ ಶ್ರದ್ಧೆ, ಬಡತನ ನಿರುದ್ಯೋಗ ಅನಕ್ಷರತೆಗೆ ಶಿಕ್ಷಣ ಮದ್ದಾಗಬಲ್ಲದು ಎಂದರು.

ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೊಟಿಹಾಳ ಮಾತನಾಡಿ, ಸಮಾಜದ ಅಭಿವೃದ್ಧಿಯು ಪ್ರಜ್ಞಾವಂತ ನಾಗರಿಕರನ್ನು ಅವಲಂಬಿಸಿದೆ. ಪ್ರತಿಯೊಬ್ಬರು ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳುವ ಅತ್ಯುತ್ತಮ ಶಿಕ್ಷಣ ಪಡೆದುಕೊಳ್ಳುವುದರ ಜತೆಗೆ ಸಮಾಜ, ದೇಶದ ಸೇವೆಯ ಮೂಲಕ ಉತ್ತಮ ನಾಗರಿಕರಾಗಿ ಹೊರಹೊಮ್ಮುವಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಎಂದರು.


ಕೆಎಎಸ್ ಪೋಲೀಸ್ ಅಧಿಕಾರಿ ಡಾ.ಐ.ಜಿ.ಮ್ಯಾಗೇರಿ ಮಾತನಾಡಿ, ಭಾರತದ ಮುಸ್ಲಿಮ್‌ರಲ್ಲಿ ಶಿಕ್ಷಣ ಪ್ರಮಾಣವು ಅತಿ ಕಡಿಮೆ ಇದ್ದು, ಮುಸ್ಲಿಮ್‌ರ ಎದುರಿಸುತ್ತಿರುವ ಎಲ್ಲ ಸವಾಲುಗಳಿಗೆ ಮೂಲ ಶಿಕ್ಷಣದ ಕೊರತೆಯೆ ಕಾರಣವಾಗಿದೆ, ಭಾರತದ ಮುಸ್ಲಿಮ್‌ ಸೌಹಾರ್ದ ಸಾಮರಸ್ಯದ ನೆಲೆಯಲ್ಲಿ ಬದುಕು ಕಟ್ಟಿಕೊಂಡು ಉತ್ತಮ ಶಿಕ್ಷಿತರಾದರೆ ಮಾತ್ರ ಮುಖ್ಯ ವಾಹಿನಿಯಲ್ಲಿ ನೆಲೆಸಲು ಸಮರ್ಥರಾಗುತ್ತಾರೆ, ಉತ್ತಮ ಶಿಕ್ಷಿತರಾಗಿ ಈ ನೆಲದ ಕಾನೂನು ಗೌರವಿಸುವುದರ ಜತೆಗೆ ಸಾಮರಸ್ಯದ ಬದುಕನ್ನ ಬದುಕಲು ಕರೆ ನೀಡಿದರು.

ಜಾನಪದ ವಿದ್ವಾಂಸ ಡಾ.ಇಮಾಮ್ ಸಾಹೇಬ್ ಹಡಗಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಓದು ಬದುಕನ್ನು ಸಾರ್ಥಕಗೊಳಿಸಬೇಕು. ಉತ್ತಮ ಓದು ಒಳ್ಳೆಯ ನಾಗರಿಕರನ್ನು ರೂಪಿಸುವ ಶಕ್ತಿ ಪಡೆದಿದೆ, ಸಮಾಜಕ್ಕೆ ದೇಶಕ್ಕೆ ಒಳ್ಳೆಯ ನಾಗರಿಕತ್ವದ ಅವಶ್ಯಕತೆ ಇದೆ, ಹತ್ತನೇ ತರಗತಿ ನಂತರ ವಿಜ್ಞಾನ ವಿಭಾಗ ನಿಮ್ಮ ಮೊದಲ ಆಯ್ಕೆಯಾಗಬೇಕು.ಎಂಬಿಬಿಎಸ್ ಬಿಟ್ಟರೆ ಎನ್ ಡಿ ಎ , ಏರ್ ಫೋರ್ಸ್, ಆರ್ಮಿ,ಅಗ್ರಿ, ನರ್ಸಿಂಗ್ ಕೋರ್ಸುಗಳಿಗೂ ಡಿಮ್ಯಾಂಡ್ ಇದೆ. ಒಂದನ್ನೇ ನಂಬಿ ಸಮಯ ವ್ಯರ್ಥ ಮಾಡದೇ ಬೇರೆ ಬೇರೆ ಆಯಾಮಗಳಲ್ಲಿ ಓದಿನ ಜತೆ ಬದುಕನ್ನು ಕಟ್ಟುವ ಇಂತಹ ಕೊರ್ಸುಗಳ ಕಡೆ ಗಮನ ಹರಿಸಬೇಕು.ಸ್ಪರ್ಧಾತ್ಮಕ ಯುಗದಲ್ಲಿ ಬಹುಮುಖ ದೃಷ್ಟಿ ಕೋನದ ಓದು ಅಗತ್ಯವಿದೆ ಎಂದರು.

ಮಾಜಿ ಶಾಸಕ ಕೆ ಶರಣಪ್ಪ ವಕೀಲರು, ಅಹಮದ್ ಹುಸೇನ್ ಆದೋನಿ, ಸೈಯದ್ ಖಾಜಾ ಮೈನುದ್ದೀನ್ ಮುಲ್ಲಾ ಮಾತನಾಡಿದರು.

ಈ ಸಂದರ್ಭದಲ್ಲಿ ಫಾದರ್ ಜಾನ್ ಪೀಟರ್, ಬಿಇಓ ಉಮಾದೇವಿ ಬಸಾಪುರ್, ಡಾ.ಸಜ್ಜಾದು ಹುಸೇನ್, ಎಚ್.ಎಚ್.ಉಸ್ತಾದ್, ಸೈಯದ್ ಕಾಜಮನುದ್ದೀನ್, ಎಚ್.ಆರ್.ಸೇಕ್, ಮೌಲಾನಾ ಫಝಿಲಾ ಅಜೀಮ್, ಮೌಲಾನಾ ಅಹ್ಮದ್ ಹುಸೇನ್, ಮೌಲಾನ ರಿಜ್ವಾನ್ಸಾಬ್‌, ಮೌಲಾನಾ ಜಾಫರ್ ಸಾಧಿಕ್ ಇತರರು ಉಪಸ್ಥಿತರಿದ್ದರು. ಜೀವನಸಾಬ್ ವಾಲಿಕಾರ್ ನಿರೂಪಿಸಿ ವಂದಿಸಿದರು.