ಶಿಕ್ಷಣದ ಮೂಲಕ ವ್ಯಕ್ತಿಯ ಬದುಕು ಮಾತ್ರವಲ್ಲ ಇಡೀ ಸಮಾಜದ ಭವಿಷ್ಯ ರೂಪಿಸಬಹುದು

ಕುಷ್ಟಗಿ: ಬಡತನ ಯಶಸ್ಸಿಗೆ ಅಡ್ಡಿಯಲ್ಲ, ಕಠಿಣ ಪರಿಶ್ರಮ ಮತ್ತು ಶಿಕ್ಷಣವೇ ಜೀವನದ ಯಶಸ್ಸಿನ ನಿಜವಾದ ಮಂತ್ರ ಎಂದು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.

ಪಟ್ಟಣದ ಲಿಂಗಾಯತ ಪಂಚಮಸಾಲಿ ಸಮಾಜದ ಉಚಿತ ಪ್ರಸಾದ ನಿಲಯದ ಸಭಾಂಗಣದಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರ ಅಭಿನಂದನಾ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣದ ಮೂಲಕ ವ್ಯಕ್ತಿಯ ಬದುಕು ಮಾತ್ರವಲ್ಲ ಇಡೀ ಸಮಾಜದ ಭವಿಷ್ಯ ರೂಪಿಸಬಹುದು. ಸಮಾಜದ ಅಭಿವೃದ್ಧಿಗೆ ಹಣಕ್ಕಿಂತ ಜ್ಞಾನ, ಸಂಸ್ಕಾರ, ಒಗ್ಗಟ್ಟು ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ಸಮಾಜಕ್ಕೆ ಕೀರ್ತಿ ತರಬೇಕು ಎಂದರು.

ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದ ಅವರು, ಸಮಾಜದಲ್ಲಿ ಒಬ್ಬರ ಬೆಳವಣಿಗೆ ಕಂಡು ಮತ್ತೊಬ್ಬರು ಕಾಲೆಳೆಯುವ ಮನೋಭಾವ ಸಂಪೂರ್ಣವಾಗಿ ತೊರೆಯಬೇಕು. ಉನ್ನತ ಹುದ್ದೆ ಪಡೆಯಲು ರಾಜಕಾರಣಿಗಳ ಶಿಫಾರಸ್ಸು ಅಲ್ಲ, ಜ್ಞಾನ ಮತ್ತು ಸಾಮರ್ಥ್ಯ ಮುಖ್ಯವಾಗಿದೆ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕೃತಿ ಮತ್ತು ಜೀವನ ಮೌಲ್ಯ ಕಲಿಸಿ ಕೊಡುವ ಅಗತ್ಯ ಹೆಚ್ಚಾಗಿದೆ ಎಂದು ಹೇಳಿದರು.

ಬಳ್ಳಾರಿ ವಿಭಾಗೀಯ ಹಿರಿಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ್ ಮಾತನಾಡಿ, ಮೀಸಲಾತಿ ಆರ್ಥಿಕತೆ ಆಧಾರಿತ ವ್ಯವಸ್ಥೆಯಲ್ಲ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಸಂವಿಧಾನಾತ್ಮಕವಾಗಿ ಕಲ್ಪಿಸಿರುವ ಅವಕಾಶವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಅವಕಾಶ ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮುಂದೆ ಬರಬೇಕು. ಕಾರ್ಯದಕ್ಷತೆ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಪಂಚಮಸಾಲಿ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಮಾತನಾಡಿ, ಹೊಟ್ಟೆಗೆ ಅನ್ನ ಎಷ್ಟು ಅಗತ್ಯವೋ ನೆತ್ತಿಗೆ ಬುದ್ಧಿಯೂ ಅಷ್ಟೇ ಅಗತ್ಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಛಲ ಮತ್ತು ಆತ್ಮವಿಶ್ವಾಸದಿಂದ ಶಿಕ್ಷಣ ಪಡೆದು ಉತ್ತಮ ಚರಿತ್ರೆಯ ವ್ಯಕ್ತಿಯಾಗಬೇಕು. ಸಮಾಜದಿಂದ ನಿರ್ಮಿಸಲು ಉದ್ದೇಶಿಸಿರುವ ವಸತಿ ನಿಲಯವು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಕಲ್ಪಿಸಲಿದೆ. ಈ ಮಹತ್ವಾಕಾಂಕ್ಷೆ ಯೋಜನೆಗೆ ಸಮಾಜದ ಪ್ರತಿಯೊಬ್ಬರೂ ಸಹಾಯ-ಸಹಕಾರ ನೀಡಬೇಕು ಎಂದರು.

ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಶರಣಪ್ಪ ಬಾಚಲಾಪುರ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ, ಶಿಸ್ತು ಮತ್ತು ಜೀವನ ಮೌಲ್ಯ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಸವರಾಜ ಹಳ್ಳೂರು, ಚಂದ್ರಶೇಖರ ನಾಲತವಾಡ, ಕೆ.ಮಹೇಶ್ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ನೌಕರರಿಗೆ ಹಾಗೂ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಿಂಗಪ್ಪ ಮಂಗಳೂರು, ದೇವೇಂದ್ರಗೌಡ ಮೇಟಿ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಹಳೇಗೌಡ್ರು, ಶಿವಪ್ಪ ಗೆಜ್ಜಲಗಟ್ಟಿ, ರಾಜು ಬ್ಯಾಳಿ, ನಾಗರಾಜ ಎಲಿಗಾರ, ರೇಖಾ ಹನುಮಸಾಗರ, ಶೋಭಾ ಪುರ್ತಗೇರಿ, ಉಮೇಶ ಮಂಗಳೂರು, ಸಿದ್ದರಾಮಪ್ಪ ಕೌದಿ, ಶರಣಪ್ಪ ಜಿಗೇರಿ, ಶಿವಸಂಗಪ್ಪ ಮಾಸ್ಟರ್, ಸುರೇಶ್ ಕೌದಿ, ಪ್ರಭು ಸೂಡಿ, ಶಿವಲಿಂಗಪ್ಪ ಸೂಡಿ, ಸೋಮು ಪುರದ್, ಸಂಗಮೇಶ್ ಕಂದಗಲ್, ಬಸವರಾಜ ಹೊರಪೇಟೆ, ಶಿವರಾಜ, ಶರಣಬಸವ ನವಲಹಳ್ಳಿ, ತಿರುಪತಿ ಎಲಿಗಾರ, ನಿಂಗಪ್ಪ ಜಿಗೇರಿ, ರವಿಕುಮಾರ್ ಮದ್ನಾಳ ಸೇರಿದಂತೆ ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳು ಇದ್ದರು.