ಕಾರಟಗಿ: ಶಿಕ್ಷಣಕ್ಕೆ ಮಹತ್ವ ನೀಡುವ ಸಮಾಜದಲ್ಲೇ ಸುಖ,ಸಂಪತ್ತು ಮತ್ತು ಸಮೃದ್ಧಿ ನೆಲೆಸಿರುತ್ತದೆ ಎಂದು ಬೂದಗುಂಪಾದ ಕೊಟ್ಟೂರು ಶಾಖಾ ವಿರಕ್ತಮಠದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಇಲ್ಲಿನ ಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾದ ನೂತನ ವಿದ್ಯಾರ್ಥಿ ವಸತಿ ನಿಲಯ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕೆಲವು ನಗರಗಳಲ್ಲಿ ಆಸ್ಪತ್ರೆ ಮತ್ತು ಪೊಲೀಸ್ ಠಾಣೆಗಳು ಹೆಚ್ಚಿರುವುದು ಅಭಿವೃದ್ಧಿಯ ಮಾನದಂಡವೆಂದು ಪರಿಗಣಿಸಲಾಗುತ್ತದೆ. ಆದರೆ ಕಾರಟಗಿಯಲ್ಲಿ ಶಿಕ್ಷಣ ಸಂಸ್ಥೆಗಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಭಾಗದ ಜನರ ಶಿಕ್ಷಣಾಭಿಮಾನಕ್ಕೆ ಜೀವಂತ ಸಾಕ್ಷಿಯಾಗಿದೆ. ಇದು ಇಡೀ ತಾಲೂಕಿಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಮಕ್ಕಳ ಭವಿಷ್ಯ ರೂಪಿಸುವ ಹೊಣೆಗಾರಿಕೆ ಶಿಕ್ಷಕರಷ್ಟೇ ಅಲ್ಲ, ಪಾಲಕರ ಮೇಲೆಯೂ ಇದೆ. ಮಕ್ಕಳಲ್ಲಿ ಸಮಯಪ್ರಜ್ಞೆ, ಶಿಸ್ತು, ಸಂಸ್ಕಾರ ಮತ್ತು ಸಾಮಾಜಿಕ ಮೌಲ್ಯ ಬೆಳೆಸುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೂ ಆದ್ಯತೆ ನೀಡಿದಾಗ ಮಾತ್ರ ದೇಶಕ್ಕೆ ಉತ್ತಮ ಪ್ರಜೆ ದೊರೆಯುತ್ತಾರೆ ಎಂದರು.

ಕಾರಟಗಿಯ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಅಡಿಪಾಯ ಹಾಕಿ, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡುತ್ತಿರುವ ಶ್ರೀಶರಣಬಸವೇಶ್ವರ ವಿದ್ಯಾ ಸಂಸ್ಥೆಯ ಸೇವೆ ಅನುಕರಣೀಯವಾಗಿದೆ ಎಂದರು.


ಶಾಲಾಡಳಿತಾಧಿಕಾರಿ ಶಿವಕುಮಾರ್ ದಿವಟರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಈ ವಸತಿ ನಿಲಯ ಸಂಸ್ಥೆಯ ಮತ್ತೊಂದು ಮಹತ್ವದ ಸಾಧನೆಯಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಬಿ.ಶೆಟ್ಟರ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಮುಖ್ಯಗುರು ಅಮರೇಶ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಆರಂಭದಿಂದ ಇಂದಿನವರೆಗಿನ ಬೆಳವಣಿಗೆ, ಶೈಕ್ಷಣಿಕ ಸಾಧನೆ ಹಾಗೂ ಸಮಾಜಮುಖಿ ಕಾರ್ಯ ವಿವರಿಸಿದರು.

ಕಾರ್ಯಕ್ರಮದಲ್ಲಿ ಯುವ ಮುಖಂಡ ಶಶಾಂಕ್ ತಂಗಡಗಿ, ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಸಂಸ್ಥೆಯ ಉಪಾಧ್ಯಕ್ಷ ಹಾಗೂ ಉದ್ಯಮಿ ಜಗದೀಶ್ ಅವರಾದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಸೋಮಲಾಪುರ, ಖಜಾಂಚಿ ಮಲ್ಲಿಕಾರ್ಜುನ ಕೊಟಗಿ, ನಿರ್ದೇಶಕ, ಉದ್ಯಮಿ ಸಣ್ಣ ವೀರೇಶಪ್ಪ ಚಿನಿವಾಲ್, ಸಿದ್ರಾಮಪ್ಪ ಪಲ್ಲೇದ್, ರುದ್ರೇಶ್ ಗಣಾಚಾರಿ, ರಾಕೇಶ್ ಕಂಚಿ, ಮಲ್ಲಿಕಾರ್ಜುನ ಹಿಂದುಪುರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶಿಕ್ಷಕ ಮಹಿಬೂಬ್ ಕಿಲ್ಲೇದಾರ, ಶಿಕ್ಷಕಿ ಸುಮಲತಾ, ಅಶ್ವಿನಿ ಗದ್ದಿ ಪ್ರಾಚಾರ್ಯ ಸಿಸ್ಟರ್ ರೀಟಾ ಕಾರ್ಯಕ್ರಮ ನಿರ್ವಹಿಸಿದರು.