ಶಿಕ್ಷಣ ಬೆಳಕಿನೆಡೆಗೆ ಕರೆದೊಯ್ಯುವ ಅಸ್ತ್ರ: ಅಲ್ಲಾವುದ್ದೀನ್

| Published : Feb 25 2025, 12:48 AM IST

ಸಾರಾಂಶ

ರಾಮನಗರ: ಶಿಕ್ಷಣ ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಲಿರುವ ಅಸ್ತ್ರ ಎಂದು ರಾಮನಗರ ಸಂಚಾರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಅಲ್ಲಾವುದ್ದೀನ್ ಹೇಳಿದರು.

ರಾಮನಗರ: ಶಿಕ್ಷಣ ವಿದ್ಯಾರ್ಥಿಗಳನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯಲಿರುವ ಅಸ್ತ್ರ ಎಂದು ರಾಮನಗರ ಸಂಚಾರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಅಲ್ಲಾವುದ್ದೀನ್ ಹೇಳಿದರು.

ನಗರದ ಡಾ.ಬಿ.ಆರ್‌. ಅಂಬೇಡ್ಕರ್ ಭವನದಲ್ಲಿ ಸೋಮವಾರ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಸಿಎಸ್ಆರ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು,

ಬಿಎಸ್ಎಸ್ ಮೈಕ್ರೋ ಪೈನಾನ್ಸ್ ಸಂಸ್ಥೆಯು ಶಿಕ್ಷಣಕ್ಕೆ ಪೂರಕವಾಗುವಂತೆ ತನ್ನ ಸಂಸ್ಥೆಯ ಸಿಎಸ್ಆರ್ ಅನುದಾನವನ್ನು ವಿದ್ಯಾರ್ಥಿ ವೇತನ ನೀಡುವ ಮೂಲಕ ಬಳಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.

ವಿದ್ಯಾರ್ಥಿ ವೇತನ ವಿದ್ಯಾರ್ಥಿ ಜೀವನದಲ್ಲಿ ತುಂಬಾ ಉಪಯುಕ್ತವಾಗಲಿದೆ. ಸಂಸ್ಥೆಯು ಸಹ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವುದನ್ನು ನಾನು ಕುದೂರಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಗಮನಿಸಿದ್ದೇನೆ. ನಿಮ್ಮ ಉದ್ದೇಶಗಳು ತಮ್ಮ ಸಂಸ್ಥೆಗೆ ಸಮಾಜದಲ್ಲಿ ಉತ್ತಮ ಹೆಸರು ತಂದುಕೊಡಲಿದೆ ಎಂದು ಹೇಳಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದು ಸದ್ಭಳಕೆ ಮಾಡಿಕೊಂಡು ಉನ್ನತ ವ್ಯಾಸಾಂಗ ಮಾಡುವಂತೆ ಅಲ್ಲಾವುದ್ದೀನ್ ಶುಭ ಕೋರಿದರು.

ಮೈಕ್ರೋ ಫೈನಾನ್ಸ್ ಸಿಓಓ ಎಸ್.ಪಂಚಾಕ್ಷರಿ ಮಾತನಾಡಿ, 1997- 98ರಲ್ಲಿ ಬಿಎಸ್ಎಸ್ ಸಂಸ್ಥೆ ಕುಣಿಗಲ್‌ನಲ್ಲಿ ಪ್ರಾರಂಭವಾಗಿ ಗ್ರಾಮೀಣ ಭಾಗದ ಮಹಿಳೆಯರು ಪ್ರಗತಿಯತ್ತ ಕೊಂಡೊಯ್ಯಲು ಅವರ ಮರುಪಾವತಿಗೆ ಅನುಗುಣವಾಗಿ ಜಿಲ್ಲೆಯಲ್ಲಿ 20 ವರ್ಷಗಳಿಂದ ಕಿರುಸಾಲಗಳನ್ನು ವಿತರಿಸುತ್ತಿದೆ. ಜೊತೆಗೆ ಸಂಸ್ಥೆಗೆ ಬರುವ ಆದಾಯದಲ್ಲಿ ಸಮಾಜಮುಖಿಯಾಗಿ ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ ಎಂದರು.

ರಾಜ್ಯದ 16 ಜಿಲ್ಲೆಯಲ್ಲಿ 3,500 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸುತ್ತಿದ್ದು, ರಾಮನಗರದಲ್ಲಿ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.60ರಷ್ಟು ಮೇಲ್ಪಟ್ಟು ಉತ್ತೀರ್ಣರಾದ 302 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರು.ಗಳ ಚೆಕ್ ವಿತರಣೆ ಮಾಡಿದ್ದೇವೆ. ಈ ವರ್ಷ ಜಿಲ್ಲೆಗೊಂದು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮಾದರಿ ಶಾಲೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ , ಬಿಎಸ್ಎಸ್ ರಾಜ್ಯ ನಿರ್ವಾಹಕ ಎಚ್.ವಿ.ಜಗದೀಶ್, ಸಿಎಸ್ಆರ್ ಮುಖ್ಯಸ್ಥ ಪಂಡಿತ್ ಗಂಗಾಧರ ಪಾಟೀಲ್, ಸಹಾಯಕ ವ್ಯವಸ್ಥಾಪಕ ಎ.ಪ್ರಶಾಂತ್ ಕುಮಾರ್, ಜಿಲ್ಲಾ ವ್ಯವಸ್ಥಾಪಕ ಯಶ್ವಂತ್ ಕುಮಾರ್, ವಲಯ ವ್ಯವಸ್ಥಾಪಕರಾದ ರಾಜಶೇಖರ, ಎಸ್.ಬಿ. ಶಂಕರ್ , ಎಚ್.ಎಸ್.ಸುನಿಲ್ ಉಪಸ್ಥಿತರಿದ್ದರು.

24ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಅಂಬೇಡ್ಕರ್ ಭವನದಲ್ಲಿ ಬಿಎಸ್ಎಸ್ ಮೈಕ್ರೋ ಫೈನಾನ್ಸ್ ಸಿಎಸ್ಆರ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.