ಸಾರಾಂಶ
ಜೋಕಾಲಿ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪಡೆದ ಶಿಕ್ಷಣದಿಂದ ಮಕ್ಕಳು ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ಹೇಳಿದರು.ನಗರದ ಕುವೆಂಪು ಕಲಾಮಂದಿರದಲ್ಲಿ ಜೆವಿಎಸ್ ಶಾಲೆ ಆಯೋಜನೆಯಲ್ಲಿ ನಗರದ ರಂಗ ನಿರ್ದೇಶಕ ವಿನೀತ್ ಕುಮಾರ್ ನೇತೃತ್ವದಲ್ಲಿ ಕಳೆದ 20 ದಿನಗಳ ಕಾಲ ಜರುಗಿದ ಜೋಕಾಲಿ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿವೆ. ಮಕ್ಕಳಿಗೆ ದೊರೆಯಬೇಕಾದ ಅಜ್ಜಿ ಅಜ್ಜ ಸೇರಿದಂತೆ ರಕ್ತ ಸಂಬಂಧಗಳ ಬಾಂಧವ್ಯ ದೊರೆಯದಂತಾಗಿದೆ. ಮಕ್ಕಳು ಟೀವಿ ಮೊಬೈಲ್ ಗೀಳಿಗೆ ಬೀಳುವ ಆತಂಕದ ಈ ದಿನಗಳಲ್ಲಿ ಇಂತಹ ಶಿಬಿರಗಳು ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಸಹಕಾರಿ ಎಂದರು.ಈ ಶಿಬಿರ ನಿರ್ದೇಶಕ ವಿನೀತ್ ಕುಮಾರ್ ಹಾಗೂ ಅವರ ತಂಡದ ಉತ್ತಮ ಕಾರ್ಯ ನಿರ್ವಹಣೆಯಿಂದ ಯಶಸ್ವಿಯಾಗಿ ನಡೆದಿದ್ದು, ಮುಂದಿನ ವರ್ಷದಿಂದ ನಮ್ಮ ಜೆವಿಎಸ್ ಶಾಲೆಯಲ್ಲಿ ನಿರಂತರವಾಗಿ ಬೇಸಿಗೆ ಶಿಬಿರ ಆಯೋಜಿಸಿ ಈ ಶಿಬಿರಕ್ಕೆ ನಮ್ಮ ಶಾಲೆ ವಿದ್ಯಾರ್ಥಿಗಳನ್ನು ಸಹ ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.ಕಳೆದ 20 ದಿನಗಳಿಂದ ಶಾಲೆ ಆವರಣದಲ್ಲಿ ನಡೆದ ಶಿಬಿರದಲ್ಲಿ ಪುಟ್ಟ ಪುಟ್ಟ 45ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರೂ ಸಹ ಒಂದು ಸಣ್ಣ ದೂರು ಇಲ್ಲದೆ ಸಮರ್ಪಕವಾಗಿ ನಿರ್ವಹಣೆ ಮಾಡಿದ ಜೋಕಾಲಿ ತಂಡದ ಕಾರ್ಯ ಶ್ಲಾಘನೀಯ ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಂತಿನಿಕೇತನ ಚಿತ್ರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ವಿಶ್ವಕರ್ಮ ಆಚಾರ್ಯ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ನಟನೆ, ಗಾಯನ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗಿದೆ. ಮಕ್ಕಳು ಆಸಕ್ತಿ ತೋರುವ ವಿಷಯಗಳನ್ನು ಗುರುತಿಸಿ ಪೋಷಕರು ಪ್ರೋತ್ಸಾಹಿಸಬೇಕೆಂದರು.ತಮ್ಮ ಜೀವಮಾನವನ್ನು ಕಲೆಗಾಗಿಯೇ ಮೀಸಲಿಸಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರನ್ನು ಸರ್ಕಾರ ಮತ್ತು ನಾಗರಿಕರು ಪ್ರೋತ್ಸಾಹಿಸಿ ಪೋಷಿಸದಿದ್ದರೆ ಪ್ರತಿಭೆ ಹೊರ ಬರುವುದಿಲ್ಲ, ಇದರಿಂದ ಸಮಾಜಕ್ಕೆ ಆಗುವ ನಷ್ಟದ ಬಗ್ಗೆ ನಾಗರೀಕರು ಮತ್ತು ಸರ್ಕಾರಗಳು ಜಾಗೃತಿ ವಹಿಸಬೇಕಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕಲಾ ವಿದರಿಗೆ ಕೊರತೆ ಇಲ್ಲ. ಅವರನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸವಾಗಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಅಗತ್ಯ ನೆರವು ನೀಡುತ್ತಿದ್ದು, ಮುಂದೆಯೂ ಈ ಕಾರ್ಯ ಮುಂದುವರಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜೆವಿಎಸ್ ಸಂಸ್ಥೆ ಕಾರ್ಯದರ್ಶಿ ರತೀಶ್ ಇದ್ದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ವೆಂಕಟೇಶಮೂರ್ತಿ ಕನ್ನಡಕ್ಕೆ ಅನುವಾದಿಸಿ, ವಿನೀತ್‌ಕುಮಾರ್ ನಿರ್ದೇಶಿಸಿದ್ದು, ಕಕ್ಕೇಶಿಯನ್‌ಚಾಕ್ ಸರ್ಕಲ್ ನಾಟಕ ಮತ್ತು ನವೀನ್ ಭೂಮಿ ಕನ್ನಡಕ್ಕೆ ಅನುವಾದಿಸಿ ಶಿವಮೊಗ್ಗದ ರಂಗನಾಥ್ ನಿರ್ದೇಶಿಸಿದ್ದ ರಾಜನಿಗೊಂದು ಉಡುಗೊರೆ ನಾಟಕವನ್ನು ಮನೋಜ್ಞ ವಾಗಿ ಪ್ರದರ್ಶಿಸಿದರು.ಈ ಎರಡು ನಾಟಕಗಳ ಪ್ರಸಾಧನ ವಸ್ತ್ರಾಲಂಕಾರ ನಿರ್ಮಲ ವೆಂಕಟೇಶ್ ನಿರ್ವಹಿಸಿದ್ದರು. ನಗರದ ಕಲಾವಿದ ಚಂದ್ರಶೇಖರ್ ಸಂಗೀತ ನಿರ್ವಹಣೆ ಮಾಡಿದ್ದರು. 7 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ರಂಗ ನಿರ್ದೇಶಕ ವಿನೀತ್ ಕುಮಾರ್ ನೇತೃತ್ವದಲ್ಲಿ 20 ದಿನಗಳಿಂದ ಜರುಗಿದ ಜೋಕಾಲಿ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
-----------------------------