ಮಕ್ಕಳಲ್ಲಿ ಬೆಳೆದಿರುವ ಶಿಸ್ತು, ಸಮಯಪ್ರಜ್ಞೆ ಮತ್ತು ಗೌರವ ನೀಡುವ ಆಸಕ್ತಿ ಬೆಳೆಸಿಕೊಂಡಿರುವುದು ಮುಂದಿನ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಬಿ.ಕೆ. ಸಪ್ತ ಶ್ರೀ ಸಂತಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಶಿಕ್ಷಣ ಕ್ಷೇತ್ರ ಮಾರಾಟವಾಗದೆ, ಜ್ಞಾನದ ದೀವಿಗೆಯೊಂದಿಗೆ ವಿದ್ಯಾರ್ಥಿಗಳಲ್ಲಿ ಭರವಸೆ ಹುಟ್ಟಿಸುವ ಬೆಳಕಾಗಬೇಕು. ಆ ನಿಟ್ಟಿನಲ್ಲಿ ಶ್ರೀ ವಿವೇಕಾನಂದ ಇಂಟರ್‌ ನ್ಯಾಷನಲ್ ಶಾಲೆ ಸಾಗುತ್ತಿದ್ದು ಮಕ್ಕಳಲ್ಲಿ ಬೆಳೆದಿರುವ ಶಿಸ್ತು, ಸಮಯಪ್ರಜ್ಞೆ ಮತ್ತು ಗೌರವ ನೀಡುವ ಆಸಕ್ತಿ ಬೆಳೆಸಿಕೊಂಡಿರುವುದು ಮುಂದಿನ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಬಿ.ಕೆ. ಸಪ್ತ ಶ್ರೀ ಸಂತಸ ವ್ಯಕ್ತಪಡಿಸಿದರು.

ನಗರದ ಈಡೇನಹಳ್ಳಿ ಗೇಟ್ ಬಳಿ ಶ್ರೀ ವಿವೇಕಾನಂದ ಇಂಟರ್‌ ನ್ಯಾಷನಲ್ ಶಾಲೆ ಮತ್ತು ಕಿಡ್ಜಿ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ ೧೭ನೇ ವರ್ಷದ ಮಕ್ಕಳ ಪ್ರತಿಭೆಯ ಅನಾವರಣ ಹಾಗೂ ಕೌಶಲ್ಯ ಸಾಂಸ್ಕೃತಿಕ-೨೦೨೬ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸಮಾಜದ ಜೊತೆಗೆ, ತನ್ನ ಕುಟುಂಬವನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿಯಾಗಬೇಕು. ಶಿಕ್ಷಣದ ಮೂಲ ಗುರಿಯ ಮಹತ್ವವನ್ನು ಎಂದಿಗೂ ಮರೆಯಬಾರದು. ಬೇರೊಬ್ಬರಿಗೆ ಮಾರ್ಗದರ್ಶಕರಾಗಿ ಜೀವನ ನಡೆಸಿದಾಗ, ಶಿಕ್ಷಣ ಪಡೆದುದಕ್ಕೆ ಸಾರ್ಥಕವಾಗುತ್ತದೆ. ಎಲ್ಲರನ್ನೂ ಸಮಾನರಾಗಿ ಕಾಣುವ ಹಾಗೂ ಗೌರವಿಸುವ ಗುಣ ಹೊಂದುವ ವಿದ್ಯಾರ್ಥಿಗಳಾಗಿ ಬದಲಾಯಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಕಿವಿ ಮಾತು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ, ನೈತಿಕತೆ ಮತ್ತು ಧಾರ್ಮಿಕ ಶಿಕ್ಷಣ ಕಡ್ಡಾಯವಾಗಿ ಮಕ್ಕಳಿಗೆ ಅಗತ್ಯವಾಗಿ ಇಂದಿನ ಸಂದರ್ಭದಲ್ಲಿ ಬೇಕಾಗಿದ್ದು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕು. ನಾವುಗಳು ಓದುವಾಗ ನೀತಿ ಪಾಠ ಮತ್ತು ಪಂಚತಂತ್ರದ ಕಥೆಗಳನ್ನು ಬೋಧಿಸುತ್ತಿದ್ದು ಅವುಗಳ ಮೌಲ್ಯ ನಾವುಗಳು ಅನುಸರಿಸಿದಾಗ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಗಿದೆ. ತನ್ನ ಮಕ್ಕಳ ದಿನಚರಿಯನ್ನು ಪೋಷಕರು ದಿನನಿತ್ಯ ಗಮನಿಸಬೇಕು. ಮಾಡುತ್ತಿರುವ ತಪ್ಪುಗಳನ್ನು ಶಿಕ್ಷಕರ ಗಮನಕ್ಕೆ ತಂದಾಗ ಬದಲಾವಣೆಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಸಂಸ್ಥಾಪಕ ಕಾರ್ಯದರ್ಶಿ ಡಾ.ಟಿ.ಆರ್.ಕೇಶವಕುಮಾರ್ ಮಾತನಾಡಿ, ವಿದ್ಯಾಭ್ಯಾಸದಲ್ಲಿ ಅತ್ಯುತ್ತಮ ಅಂಕದೊಂದಿಗೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಪದಕದೊಂದಿಗೆ ಪುರಸ್ಕರಿಸುವ ಕಾರ್ಯಕ್ರಮ ಇದಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯಾದ ನಮ್ಮ ಶಾಲೆ ಉತ್ತಮ ಸಂಸ್ಕಾರ ಮತ್ತು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಮತ್ತು ಮನರಂಜನಾ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಟಿ.ಕೆ. ರವೀಂದ್ರನಾಥ್, ಕಿಡ್ಜಿ ಶಾಲೆಯ ಸಂಯೋಜಕಿ ಎಚ್.ವಿ. ಶೀಲಾ, ಶಾಲಾ ಉಪ ಪ್ರಾಂಶುಪಾಲೆ ಅಜ್ರ ನೂರು ಪೌಜಿಯಾ, ಎಚ್‌ಓಡಿಗಳಾದ ಕಿರಣ್ ಮತ್ತು ಸರ್ಗ ಸೇರಿದಂತೆ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ,ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.