ನರಸಿಂಹರಾಜಪುರಶಿಕ್ಷಣ ಎಂಬುದು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಜ್ಞಾನಾರ್ಜನೆ ಕಣಜವಾಗಬೇಕು ಎಂದು ಸಿಂಹನ ಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇಭಟ್ಟಾರಕ ಸ್ವಾಮೀಜಿ ತಿಳಿಸಿದರು.

- ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ, ಆಂಗ್ಲ ಮಾದ್ಯಮ ಶಾಲೆ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಶಿಕ್ಷಣ ಎಂಬುದು ಕೇವಲ ಅಂಕಗಳಿಕೆಗೆ ಸೀಮಿತವಾಗದೆ ಜ್ಞಾನಾರ್ಜನೆ ಕಣಜವಾಗಬೇಕು ಎಂದು ಸಿಂಹನ ಗದ್ದೆ ಬಸ್ತಿಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಸಂಜೆ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ವೇದಿಕೆಯಲ್ಲಿ ಜ್ವಾಲಾಮಾಲಿನಿ ದೇವಿ ಆಂಗ್ಲ ಮಾದ್ಯಮ ಶಾಲೆ ಹಾಗೂ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಎಂಬುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳೆವಣಿಗೆಗೆ ಪ್ರಮುಖ ಸಾಧನ. ಪ್ರತಿ ಮಕ್ಕಳ ವ್ಯಕ್ತಿತ್ವ ವಿಕಸನವಾಗಬೇಕು. ಶಿಕ್ಷಣದ ಜೊತೆಗ ಸಂಸ್ಕಾರ ದೊರೆತಾಗ ಮಾತ್ರ ಶಿಕ್ಷಣಕ್ಕೆ ಹೆಚ್ಚು ಮೌಲ್ಯ ಬರುತ್ತದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಮಕ್ಕಳು ಇಂದು ದೊಡ್ಡ ಸ್ಥಾನದಲ್ಲಿದ್ದಾರೆ. ಪ್ರತಿಭಾ ಕಾರಂಜಿ, ಕ್ರೀಡಾ ಕೂಟದಂತಹ ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ಶಾಲಾ ವಿದ್ಯಾರ್ಥಿಗಳು ಅತಿ ಹೆಚ್ಚು ಬಹುಮಾನ ಪಡೆದಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ನಮ್ಮ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರಮಿಸುತ್ತಿದ್ದಾರೆ. ಶಿಕ್ಷಣದಲ್ಲಿ ಕ್ರಾಂತಿಯಾಗಬೇಕು ಎಂಬುದು ನಮ್ಮ ಬಯಕೆ. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಕರ್ತವ್ಯದ ಬಗ್ಗೆ ಗಮನ ನೀಡಬೇಕು. ಗುರು ಹಿರಿಯರ, ತಂದೆ, ತಾಯಿಗಳ ಸಲಹೆಯಂತೆ ನಡೆದರೆ ಸಮಾಜದ ಶಕ್ತಿಯಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತಹ ಶಕ್ತಿಯನ್ನು ಮಹಾ ಮಾತೆ ಶ್ರೀ ಜ್ವಾಲಾಮಾಲಿನಿ ದೇವಿ ಕರುಣಿಸಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ ಶಾಲೆ ಎಂದರೆ ಕೇವಲ ಪಾಠವಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಕೇಂದ್ರವಾಗಿದೆ. ಪ್ರತಿಭೆ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು. ವಿದ್ಯಾರ್ಥಿಗಳ ಪಾಲಿಗೆ 10 ನೇ ತರಗತಿ ಪ್ರಮುಖ ಘಟ್ಟ. ಉತ್ತಮ ಅಂಕಗಳಿಸಲು ಎಲ್ಲಾ ವಿದ್ಯಾರ್ಥಿಗಳು ಪ್ರಯತ್ನ ನಡೆಸಬೇಕು. ಪೋಷಕರು ಸಹ ತಮ್ಮ ಮಕ್ಕಳ ಪ್ರಗತಿಗೆ ಮನೆಗಳಲ್ಲಿ ಸ್ವಲ್ಪ ಸಮಯ ಮೀಸಲಿಡಬೇಕು. ಪ್ರತಿ ಸ್ಪರ್ಧೆಗಳಲ್ಲೂ ಮಕ್ಕಳು ಭಾಗವಹಿಸುವಂತೆ ಪೋಷಕರು, ಶಿಕ್ಷಕರು ಪ್ರೋತ್ಸಾಹ ನೀಡಬೇಕು. ಸಿಂಹನಗದ್ದೆ ಬಸ್ತಿಮಠದ ಶ್ರೀ ಕ್ಷೇತ್ರ ಉತ್ತಮ ಕಾರ್ಯ ಮಾಡುತ್ತಿದ್ದು ಶಿಕ್ಷಣ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಪಿಟಿಎ ಅಧ್ಯಕ್ಷ ಸುಧಾಕರ್ ಮಾತನಾಡಿ, ನಮ್ಮ ಸಂಸ್ಥೆ ಕೈ ಗೊಂಡ ಕಾರ್ಯಕ್ರಮಗಳಿಗೆ ಪೋಷಕರು ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ಪೋಷಕರಿಗೆ ಕರೆ ನೀಡಿದರು.

ಆಡಳಿತ ಮಂಡಳಿ ಖಜಾಂಚಿ ಶ್ರೀ ಬ್ರಹ್ಮ ದೇವಜೈನ್ ಮಾತನಾಡಿ, ಪೂಜ್ಯರು ದೂರದೃಷ್ಠಿಯೊಂದಿಗೆ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ದು ಸ್ಥಳೀಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಆಡಳಿತ ಮಂಡಳಿ ಹಿರಿಯ ಸದಸ್ಯ ಡಿ.ಆರ್.ಅಂಗಡಿ, ಶ್ರೀ ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಸುಜಾತಾ ಕುಮಾರಿ, ಶ್ರೀ ಜ್ವಾಲಾಮಾಲಿನಿ ಆಂಗ್ಲ ಮಾದ್ಯಮ ಶಾಲಾ ಪ್ರಭಾರಿ ಮುಖ್ಯೋಪಾಧ್ಯಾಯಿನಿ ಪ್ರಿನ್ಸಿ ಸುನೀಲ್, ವಿದ್ಯಾರ್ಥಿನಿ ಸಂಘದ ಅಧ್ಯಕ್ಷೆ ಕು.ಕೀರ್ತನ, ಎಸ್.ಜೆ.ಡಿ. ಶಾಲೆ ಕ್ಯಾಪ್ಟನ್ ಕು.ವೀಕ್ಷ ಉಪಸ್ಥಿತರಿದ್ದರು.

ಗುಣಪಾಲ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಎಂ.ಉಷಾ ವಂದಿಸಿದರು. ನಂತರ ಎರಡೂ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.