ಶಿಕ್ಷಣವು ಕೇವಲ ಅಂಕ ಗಳಿಸುವ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬೇಕೆಂದು ಕೆಬಿಆರ್‌ಸಿ ಸಂಪತ್ ಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಿಕ್ಷಣವು ಕೇವಲ ಅಂಕ ಗಳಿಸುವ ಚಟುವಟಿಕೆಗೆ ಮಾತ್ರ ಸೀಮಿತವಾಗದೆ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗಬೇಕೆಂದು ಕೆಬಿಆರ್‌ಸಿ ಸಂಪತ್ ಕುಮಾರ್ ಹೇಳಿದರು.ತಾಲೂಕಿನ ಬೆಳಗಟ್ಟ ಗ್ರಾಮದ ನರಹರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅದ್ಭುತವಾದ ಪ್ರತಿಭೆಯಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಗೆಳೆತನದ ಗಂಗೋತ್ರಿ ಸಂಘಟನೆ ಜಾತ್ಯಾತೀತವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಂಚಾಲಕ ನಾಗರಾಜ್ ಬೆಳಗಟ್ಟ ಮಾತನಾಡಿ, 1990-91ನೇ ಸಾಲಿನ ವಿದ್ಯಾರ್ಥಿಗಳ ಈ ಸಂಘಟನೆಯು ಸಮಾಜಮುಖಿಯಾಗಿ ಬೆಳೆಯುತ್ತಿದೆ.ನಮ್ಮ ಶಾಲೆಯ ಮಣ್ಣಿನ ಋಣವನ್ನು ತೀರಿಸುವ ಒಂದು ಸಣ್ಣ ಪ್ರಯತ್ನ ಇದಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವು ನೀಡುವ ಪುರಸ್ಕಾರ ಅವರ ಮುಂದಿನ ಉನ್ನತ ಸಾಧನೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶ, ಡಾ.ಗುರುನಾಥ್ ಮಾತನಾಡಿ, ಸಂಸ್ಕೃತಿ ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖಗಳು. ಗೆಳೆತನದ ಗಂಗೋತ್ರಿ ಸಂಘಟನೆಯು ಸ್ನೇಹದ ಮೂಲಕ ಸಮಾಜದಲ್ಲಿ ಜ್ಞಾನದ ದೀವಿಗೆಯನ್ನು ಹಚ್ಚುತ್ತಿದೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರತಿಭೆಗಳಿಗೆ ಆನೆಬಲ ನೀಡುತ್ತವೆ ಎಂದರು.
ಹಳೆಯ ನೆನಪುಗಳ ಮೆಲುಕು, ಸಾಧನೆಯ ಹಾದಿಯಲ್ಲಿರುವ ಪುಟ್ಟ ಪಾದಗಳಿಗೆ ಹಿರಿಯರ ಬೆಂಬಲ ಹಾಗೂ ಗ್ರಾಮದ ತುಂಬೆಲ್ಲ ಪಸರಿಸಿದ ಸಾಂಸ್ಕೃತಿಕ ಕಂಪಿನ ನಡುವೆ ಪ್ರತಿಭಾ ಪುರಸ್ಕಾರ ಸಮಾರಂಭ ಅತ್ಯಂತ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಶಾಲೆಯ ವಿದ್ಯಾರ್ಥಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ಚಾಲನೆ ಪಡೆಯಿತು. ಮಂಗಳವಾದ್ಯಗಳ ಘೋಷದೊಂದಿಗೆ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವಾಗ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅಕ್ಷರ ಸಂಸ್ಕೃತಿಯ ವಿಜಯಯಾತ್ರೆಯಂತೆ ಕಂಡುಬಂದಿತು.
ಅಭಿನಂದನಾ ಪತ್ರ, ನಗದು ಬಹುಮಾನ ಹಾಗೂ ಪುಸ್ತಕ ವಿತರಣೆಯನ್ನು ನಿವೃತ್ತ ಮುಖ್ಯೋಪಾದ್ಯಾಯ ಡಿ.ಎಲ್ ತಿಮ್ಮಾರೆಡ್ಡಿ ನೆರವೇರಿಸಿದರು. ಪ್ರಾಚಾರ್ಯ ಲೋಕೇಶ್ ವಿ, ಮುಖ್ಯೋಪಾದ್ಯಾಯ ಮಂಜುನಾಥ.ಎಸ್, , ಉಪನ್ಯಾಸಕರಾದ ಮಹಮದ್ ಶಕೀಲ್ , ಸಂತೋಷ್ ಕುಮಾರ್, ರಾಮು, ಅಜ್ಜಣ್ಣ, ಗೆಳೆತನದ ಗಂಗೋತ್ರಿ ಬಳಗದ ಎಲ್ಲಾ ಸದಸ್ಯರು, ಪೋಷಕರು, ಗ್ರಾಮಸ್ಥರು ಪಿಯು ಕಾಲೇಜು, ಪ್ರೌಢಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.