ಸಾರಾಂಶ
ಹತ್ತು ಬೆಳದಿಂಗಳು, ಅಣುಬೋಧನಾ ಕಾರ್ಯಾಗಾರ ಉದ್ಘಾನಟೆಯಲ್ಲಿ ಡಾ.ಹೆಚ್.ವಿ ವಾಮದೇವಪ್ಪಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಅಂಕಗಳಿಸುವುದಕ್ಕಷ್ಟೇ ಶಿಕ್ಷಣ ಸೀಮಿತ ಆಗುವುದು ಬೇಡ. ಸಾಮರ್ಥ್ಯಾಧಾರಿತ ಪ್ರಶಿಕ್ಷಣಾರ್ಥಿಗಳು ಇಂದಿನ ಸಮಾಜಕ್ಕೆ ಬೇಕು ಎಂದು ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ.ಎಚ್.ವಿ.ವಾಮದೇವಪ್ಪ ತಿಳಿಸಿದರು.ದಾವಣಗೆರೆ ವಿಶ್ವವಿದ್ಯಾನಿಲಯ, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಹತ್ತು ಬೆಳದಿಂಗಳ ಕಾರ್ಯಕ್ರಮ ಅಣುಬೋಧನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಒಳ್ಳೆಯ ಶಿಕ್ಷಕನಾಗಬೇಕಾದರೆ ಕಲಾವಿದನಾಗಿರಬೇಕು. ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಮೂಡಿಸುವುದು ಹತ್ತು ಬೆಳದಿಂಗಳ ಕಾರ್ಯಕ್ರಮದ ಉದ್ದೇಶ. ರಂಗ ನಟ ಅಶೋಕ್ ಬಾದರದಿನ್ನಿ ಅವರು ಹತ್ತು ಬೆಳದಿಂಗಳು ಎನ್ನುವ ಪದವನ್ನು ಸೂಚಿಸಿದರೆಂದು ಸ್ಮರಿಸಿಕೊಂಡ ಡಾ.ಹೆಚ್.ವಿ.ವಾಮದೇವಪ್ಪ ಮುಂದೆ ಶಿಕ್ಷಕರಾಗುವ ನೀವುಗಳು ಮಕ್ಕಳಲ್ಲಿರುವ ಅಂತರ್ಗತ ಸಾಮರ್ಥ್ಯವನ್ನು ಗುರುತಿಸಬೇಕು. ಮಕ್ಕಳ ಸರ್ವತೋಮುಖ ವಿಕಾಸ ಶಿಕ್ಷಣದ ಗುರಿಯಾಗಬೇಕೆಂದರು.
ಸಾಮರ್ಥ್ಯಗಳೇ ಬೇರೆ, ಅಂಕಗಳೆ ಬೇರೆ. ಉದ್ಯೋಗ ಪಡೆಯಲು ಅಂಕಗಳಷ್ಟೆ ಮುಖ್ಯವಲ್ಲ. ಸಾಮರ್ಥ್ಯವೂ ಇರಬೇಕು. ಬಿಇಡಿ ನಂತರ ಶಿಕ್ಷಕರುಗಳೆ ಆಗಬೇಕೆಂದೇನೂ ಇಲ್ಲ. ಸಾಕಷ್ಟು ಕ್ಷೇತ್ರಗಳಿವೆ. ಎಲ್ಲಿಯಾದರೂ ಸಾಧನೆ ಮಾಡಬಹುದು. ಸದೃಢ ಸಮಾಜ ಕಟ್ಟುವಂತ ಸಾಧನೆ ಮಾಡುವ ಶಿಕ್ಷಣ ಇಂದಿನ ಮಕ್ಕಳಿಗೆ ಅತ್ಯವಶ್ಯಕ. ತರಬೇತಿಯಲ್ಲಿ ಸಿಗುವ ಜ್ಞಾನ ಪಡೆದುಕೊಳ್ಳಿ. ನಿರಂತರವಾಗಿ ಯಾರು ಕಲಿಕೆಯಲ್ಲಿ ತೊಡಗಿರುತ್ತಾರೋ ಅವರೆ ನಿಜವಾದ ಶಿಕ್ಷಕರು. ಜ್ಞಾನ ಎನ್ನುವುದು ದೊಡ್ಡ ಸಾಗರವಿದ್ದಂತೆ. ಬಿಇಡಿ ನಿಮ್ಮ ಜೀವನದಲ್ಲಿ ಮುಖ್ಯ ಹಂತ. ಜ್ಞಾನದ ಜೊತೆ ತಂತ್ರಜ್ಞಾನಕ್ಕೆ ಅಪ್‍ಡೇಟ್ ಆಗಿ ಮನೋಧೋರಣೆ ಬದಲಾಯಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಡಾ.ಹೆಚ್.ವಿ ವಾಮದೇವಪ್ಪ ಕರೆ ನೀಡಿದರು.ಬಿಇಡಿ ಎಂದರೆ ಕೌಶಾಲ್ಯಾಧಾರಿತ ಶಿಕ್ಷಣ. ಅಂಕಗಳ ಹಿಂದೆ ಓಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವಿರಬೇಕಾದರೆ ಕೌಶಲ್ಯಾಧಾರಿತ ಶಿಕ್ಷಣ ಮುಖ್ಯ. ತರಗತಿಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಪಾಠದ ಕಡೆಗೆ ಹಿಡಿದಿಟ್ಟುಕೊಳ್ಳಬೇಕಾದರೆ ಶಿಕ್ಷಕರುಗಳಿಗೆ ಸಂವಹನಾ , ನಿರ್ವಹಣಾ ಕೌಶಲ್ಯ ಬೇಕು. ಒಳ್ಳೆಯ ಶಿಕ್ಷಕ, ಒಳ್ಳೆಯ ಸಂಶೋಧಕನಾಗಿರುತ್ತಾನೆ. ಪ್ರಶಿಕ್ಷಣಾರ್ಥಿಗಳಿಗೆ ಅಣುಬೋಧನೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಪ್ರತಿಯೊಂದು ಅಣುವಿನ ಮೇಲೆ ಪ್ರಭುತ್ವ ಸಾಧಿಸುವುದೇ ಅಣುಬೋಧನೆ. ವಿಮರ್ಶಾತ್ಮಕ ಚಿಂತನಾ ಕೌಶಲ್ಯ ಹಾಗೂ ಸೃಜನಾತ್ಮಕ ಚಿಂತನಾ ಕೌಶಲ್ಯ ಶಿಕ್ಷಕರುಗಳಲ್ಲಿರಬೇಕೆಂದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ ಎಂ.ಆರ್.ಜಯಲಕ್ಷ್ಮಿ ಮಾತನಾಡಿ ಅಣುಬೋಧನೆ ಎನ್ನುವುದು ಪ್ರಶಿಕ್ಷಣಾರ್ಥಿಗಳಿಗೆ ಬೇಕು. ಮೈಕ್ರೋ ಟೀಚಿಂಗ್ ಕಡೆ ಪ್ರಶಿಕ್ಷಣಾರ್ಥಿಗಳು ಗಮನ ಹರಿಸಲು ಅಣುಬೋಧನೆ ಸಹಕಾರಿಯಾಗಲಿದೆ ಎಂದರು. ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು.ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಪ್ರೊ.ಹೆಚ್.ಎನ್.ಶಿವಕುಮಾರ್, ಉಪನ್ಯಾಸಕರುಗಳಾದ ಡಾ.ಜಿ.ಹನುಮಂತರೆಡ್ಡಿ, ಪ್ರೊ.ಓ.ಎಂ.ಮಂಜುನಾಥ್ ವೇದಿಕೆಯಲ್ಲಿದ್ದರು.