ಶಿಕ್ಷಣ ಜೀವನವನ್ನು ಸಮರ್ಥವಾಗಿ ರೂಪಿಸಬೇಕು: ಭೋಜೇ ಗೌಡ

| Published : Mar 25 2025, 12:45 AM IST

ಸಾರಾಂಶ

ಸೋಮವಾರ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ವಾರ್ಷಿಕೋತ್ಸವ ಕಾರ್ಯಕ್ರಮ ನೆರವೇರಿತು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಭೋಜೇ ಗೌಡ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಪುತ್ತೂರು

ಶಿಕ್ಷಣವು ಕಲ್ಲು ಮುಳ್ಳಿನ ಹಾದಿಯಿಂದ ಹೂವಿನ ಹಾದಿಯತ್ತ ನಡೆಯುವ ಪ್ರಕ್ರಿಯೆಯಾಗಿದೆ. ಇದನ್ನು ಸಾಧಿಸಿದ ಬಳಿಕವೂ ನಮ್ಮತನವನ್ನು ನಾವು ಬಿಡಕೂಡದು. ಗುರು- ಶಿಷ್ಯರ ನಡುವಿನ ಸಂಬಂಧ ಎಂದೆಂದಿಗೂ ಧೃಢವಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಭೋಜೇ ಗೌಡ ಹೇಳಿದ್ದಾರೆ.

ಸೋಮವಾರ ಪುತ್ತೂರು ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಂ.ಐ.ಟಿ ಮಣಿಪಾಲದ ಶೈಕ್ಷಣಿಕ ವಿಭಾಗದ ಸಹ ನಿರ್ದೇಶಕ ಡಾ. ರವಿಪ್ರಕಾಶ್ ಮಾತನಾಡಿ, ಎಲ್ಲವನ್ನೂ ಪ್ರಶ್ನಿಸುವ ಗುಣ ಕುತೂಹಲವನ್ನು ಬೆಳೆಸುತ್ತದೆ. ಇದು ನಮ್ಮ ಪ್ರಗತಿಗೆ ಸಹಾಯಕವಾಗಿದೆ. ಉದ್ಯೋಗಾವಕಾಶಗಳು ಒದಗಿ ಬಂದಾಗ ನಮ್ಮ ನಡವಳಿಕೆ ಹಾಗೂ ಕೌಶಲ್ಯ ಮುಂತಾದ ಗುಣಗಳು ಅಗತ್ಯ. ಅದನ್ನು ವಿದ್ಯಾರ್ಥಿಗಳು

ಶಿಕ್ಷಣ ಪಡೆಯುವಾಗಲೇ ಮೈಗೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಪೂರ್ವಾಧ್ಯಕ್ಷ ಎಸ್.ಆರ್ ರಂಗಮೂರ್ತಿ ಮಾತನಾಡಿ, ವಿದ್ಯೆ ಪಡೆದುಕೊಳ್ಳುವುದು ಮಾತ್ರವಲ್ಲದೆ ತನ್ನ ರಾಷ್ಟ್ರ, ಧರ್ಮ ಹಾಗೂ ಸಂಸ್ಕೃತಿ ಪ್ರೀತಿಸಿ ತನ್ನ ವ್ಯಕ್ತಿತ್ವ ದೃಢವಾಗಿ ರೂಪಿಸಿಕೊಳ್ಳಬೇಕು ಎಂದರು.

ವೈದಿಕ ವಿದ್ವಾಂಸ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳ ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಅಧ್ಯಾಪಕರನ್ನು ಗೌರವಿಸಲಾಯಿತು.

ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿ ಕೃಷ್ಣ ಕೆ.ಎನ್,

ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಶ್ರೀಧರ ಎಚ್.ಜಿ, ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ವಿಶೇಷಾಧಿಕಾರಿ ಡಾ. ಶ್ರೀಧರ ನಾಯಕ್, ಆಡಳಿತ ಮಂಡಳಿಯ ಸದಸ್ಯೆ ಶುಭಾ ಅಡಿಗ, ಎ .ಜಗನ್ನಾಥ್ ಇದ್ದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ವಾರ್ಷಿಕ ವರದಿ ವಾಚಿಸಿದರು. ಉಪಪ್ರಾಂಶುಪಾಲ ಪ್ರೊ. ಶಿವಪ್ರಸಾದ್ ಕೆ.ಎಸ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಕ್ಷೇಮಪಾಲಕ ಡಾ. ಅರುಣ್ ಪ್ರಕಾಶ್ ವಂದಿಸಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ ಎಸ್. ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಲೇಜಿನ ಯಕ್ಷರಂಜಿನಿಯ ವಿದ್ಯಾರ್ಥಿಗಳಿಂದ ‘ವರಹಾವತಾರ ವರಾಹಮಾಲಿಕೆ’ ಯಕ್ಷಗಾನ ನಡೆಯಿತು.