ಸಾರಾಂಶ
ಹೂವಿನಹಡಗಲಿ: ಶಿಕ್ಷಣವು ಅಕ್ಷರ ಕಲಿಸುವ ಜತೆಗೆ ಜೀವನದ ಮೌಲ್ಯಗಳನ್ನು ಕಲಿಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕನನ್ನಾಗಿ ಮಾಡುವ ಶಕ್ತಿ ಇದೆ ಎಂದು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯರು ಹೇಳಿದರು.
ಪಟ್ಟಣದ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ, ತಾಲೂಕಿನ ನಾಗತಿ ಬಸಾಪುರ ಗ್ರಾಮದಲ್ಲಿ ಆಯೋಜಿಸಿರುವ, ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸೇವಾ ಶಿಬಿರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಅಗತ್ಯವಿದೆ. ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಗ್ರಾಮೀಣ ಪ್ರದೇಶದ ಜನ ಅನುಭವಿಸುತ್ತಿರುವ ಸಮಸ್ಯೆಗಳು, ಅವರ ದೈನಂದಿನ ಬದುಕಿನ ಚಿತ್ರಣ ಸೇರಿದಂತೆ ಬದುಕಿನ ಎಲ್ಲ ಆಯಾಮಗಳನ್ನು ಅರಿಯಲು ಸಾಧ್ಯವಾಗುತ್ತದೆ. ಜತೆಗೆ ನಮ್ಮ ಮನೆಯಲ್ಲಿ ಕೆಲಸ ಮಾಡದ ನಾವು, ಹಳ್ಳಿಗಳ ಹಾದಿ ಬೀದಿಗಳನ್ನು ಸ್ವಚ್ಛತೆ ಮಾಡುವುದರಿಂದ ಆಗುವ ಉಪಯೋಗವನ್ನು ಅರಿಯಲು ಸಾಧ್ಯವಿದೆ ಎಂದರು.
ಈ ಶಿಬಿರದ ಉದೇಶವನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ, ಎಸೆಸೆಲ್ಸಿ ಮತ್ತು ಪಿಯುಸಿ ಹಂತದ ಅಂಕಗಳು, ಬದುಕಿಗೆ ತಿರುವನ್ನು ನೀಡುತ್ತವೆ ಎಂದು ಹೇಳುತ್ತಾರೆ, ಆದರೆ ಪದವಿ ಹಂತದಲ್ಲಿನ ಶಿಕ್ಷಣ ನಮ್ಮ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳಲ್ಲಿ ಮೊದಲು ಪಾಮಾಣಿಕ ಪಯತ್ನ ಮತ್ತು ಶ್ರದ್ಧೆ ಹಾಗೂ ಕಾಯಕದ ಮಹತ್ವವನ್ನು ಶರಣರು ನಮಗೆ ಕಲಿಸಿಕೊಟ್ಟಿದ್ದಾರೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವಿದ್ದೇವೆ. ಹಿಂದಿನಿಂದಲೂ ಶಿಕ್ಷಣದ ಅದನ್ನು ಗಮನಿಸಿ ಅಭ್ಯಾಸ ಮಾಡಬೇಕು. ನಮ್ಮ ಬದಲಾವಣೆಗೆ ಶಿಕ್ಷಣ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ನಿತ್ಯ ಪತ್ರಿಕೆಗಳ ಅಭ್ಯಾಸವನ್ನು ರೂಢಿಸಿಕೊಳ್ಳಿ, ಶತಮಾನದಿಂದಲೂ ಸಮಾಜದವನ್ನು ಬದಲಾಯಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತಾ ಬಂದಿವೆ ಎಂದರು.ಕಾಲೇಜು ಪ್ರಾಚಾರ್ಯ ಎಂ.ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ಎಸ್ ಘಟಕಾಧಿಕಾರಿಗಳಾದ ಜಿ.ಟಿ.ಉಮಾದೇವಿ, ಡಾ.ಎಂ. ಭೀಮಪ್ಪ, ಕಾಲೇಜು ಆಡಳಿತ ಮಂಡಳಿಯ ಎಚ್.ಡಿ.ಜಗ್ಗಿನ್, ಕೆ.ಅಯ್ಯನಗೌಡ, ವಕೀಲರಾದ ಆಟವಾಳಗಿ ಕೊಟ್ರೇಶ ಸೇರಿದಂತೆ, ಕಾಲೇಜಿನ ಪ್ರಾಧ್ಯಾಪಕರು, ಗ್ರಾಪಂ ಸದಸ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಂತರದಲ್ಲಿ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.