ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಪಾಲಕರು ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯ
ಕುಕನೂರು: ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳ ಕಾಳಜಿ ವಹಿಸಿ ಶೈಕ್ಷಣಿಕ ಆಶಯ ಈಡೇರಿಸಬೇಕು ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯ ರಾಮರಡ್ದೆಪ್ಪ ಹಾಲಕೇರಿ ಹೇಳಿದರು.
ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಪಾಲಕರ ಶಿಕ್ಷಕರ ಮಹಾಸಭೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪಾಲಕರು ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಿ ಶೈಕ್ಷಣಿಕ ಆಶಯಗಳನ್ನು ಈಡೇರಿಸುವ ಅವಶ್ಯಕತೆ ಇದೆ. ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ಪಾಲಕರು ಹಾಗೂ ಶಿಕ್ಷಕರ ಪಾತ್ರ ಬಹುಮುಖ್ಯ. ಪಾಲಕರು ಮನೆಯಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸ, ಬರೆಯಲು ಸೂಕ್ತ ಜಾಗ ಮಾಡಬೇಕು. ಮಕ್ಕಳು ಶಾಲೆ ತಪ್ಪಿಸದಂತೆ ಶಾಲೆಗೆ ಹಾಜರಾಗಿದ್ದಾರೇಯೆ ಎಂದು ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿ ಖಚಿತ ಮಾಡಿಕೊಳ್ಳಬೇಕು. ಶಾಲೆ ಹಾಗೂ ತರಗತಿಗೆ ನಿರಂತರವಾಗಿ ವಿದ್ಯಾರ್ಥಿಗಳು ಬರುತ್ತಿದ್ದರೆ, ಮಕ್ಕಳ ಶೈಕ್ಷಣಿಕ ಮಟ್ಟದಲ್ಲಿ ಬಹಳ ಬದಲಾವಣೆ ಆಗುತ್ತದೆ ಎಂದರು.ಮಗು ಯಾವ ವಿಷಯದಲ್ಲಿ ಕುಂಠಿತವಾಗಿದ್ದಾರೋ, ಆ ವಿಷಯದ ಶಿಕ್ಷಕರನ್ನು ಸಂಪರ್ಕಿಸಿ ಅವರೊಂದಿಗೆ ಸಮಾಲೋಚಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಬಹುದು. ತರಗತಿಯ ಎಲ್ಲ ಮಕ್ಕಳ ಪಾಲಕರು ಕಾರ್ಯಕ್ರಮಕ್ಕೆ ಬಂದು ಮಕ್ಕಳ ಶೈಕ್ಷಣಿಕ ಗುಣಮಟ್ಟ, ಎಲ್ಲ ಶಿಕ್ಷಕರ ಹಾಗೂ ಶಾಲೆಯ ಸಂಪರ್ಕ ಸಾಧನವಾಗುತ್ತದೆ. ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು, ಸರ್ಕಾರದ ಆದೇಶದಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಪಾಲಕರ ಹಾಗೂ ಶಿಕ್ಷಕರ ಮಹಾಸಭೆ ನಡೆಯಲಿದೆ ಎಂದರು.
ಎಸ್ ಡಿಎಂಸಿ ಅಧ್ಯಕ್ಷ ಕಳಕನಗೌಡ ಸಾದರ, ಪದಾಧಿಕಾರಿಗಳಾದ ಗವಿಸಿದ್ದಪ್ಪ ಗುಳಗಣ್ಣನವರ್, ಗೀತಾ ಸಜ್ಜನ್, ಶೈಲಜಾ ಹತ್ತಿಕಟಗಿ, ಶಾಲಾ ಶಿಕ್ಷಕ ಜಗದೀಶ ಅಜ್ಜಣ್ಣನವರ್, ರಂಗಪ್ಪ ಓಳೇಕರ್, ಜಯಪ್ಪ ಕನಕಮ್ಮನವರ್, ಬಸಮ್ಮ ಮೇಟಿ, ಶರಣಪ್ಪ ಬೊಮಳೇಕರ್, ಶ್ರೀಶೈಲಪ್ಪ, ರೋಹಿಣಿ, ಸಂತೋಷ ಕುಮಾರ, ಶ್ರೀದೇವಿ ಬೆಳದಡಿ, ಮುರಾರಿ ಭಜಂತ್ರಿ, ರಮೇಶ ಕೆ.ಟಿ, ಶಾಲಾ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಪದಾಧಿಕಾರಿಗಳು, ಪಾಲಕರಿದ್ದರು.