ಸಾರಾಂಶ
ಬಸವಣ್ಣನವರು ತಾವು ಮಾತ್ರ ಬೆಳೆಯದೆ ಸಕಲ ಜನಾಂಗವನ್ನು ಬೆಳೆಸಲು ಪ್ರಯತ್ನಿಸಿದುದರಿಂದ ವಿಶ್ವಗುರುವಾದರು
ಕನ್ನಡಪ್ರಭ ವಾರ್ತೆ ಮೈಸೂರು
ಸಾರ್ಥಕ ಬದುಕನ್ನು ರೂಪಿಸಿಕೊಳ್ಳಲು ವಚನ ಸಾಹಿತ್ಯ ಸಹಕಾರಿ ಎಂದು ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ ತಿಳಿಸಿದರು.ನಗರದ ಅಗ್ರಹಾರದ ಶ್ರೀಕಾಂತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಅನ್ನಪೂರ್ಣಮ್ಮ ಮತ್ತು ಪ್ರೇಮಾ ಪ್ರಭುಸ್ವಾಮಿ ಅವರ ದತ್ತಿ ಅಂಗವಾಗಿ ಆಯೋಜಿಸಿದ್ದ 102ನೇ ಶಾಲೆಗಳೆಡೆಗೆ ವಚನಗಳ ನಡಿಗೆ ಮತ್ತು 25ನೇ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಸಪ್ತ ಸೂತ್ರಗಳ ವಚನವನ್ನು ಎಳೆಯ ವಯಸ್ಸಿನಲ್ಲಿ ಅಳವಡಿಸಿಕೊಂಡು ಅದರಂತೆ ನಡೆದರೆ ಚಾರಿತ್ರ್ಯ ಶುದ್ಧವಾಗಿ ವಿದ್ಯಾರ್ಥಿ ಜೀವನಕ್ಕೆ ಮೌಲ್ಯ ಬರುತ್ತದೆ ಎಂದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪಾ ಕುಮಾರಸ್ವಾಮಿ ಮಾತನಾಡಿ, ಬಸವಣ್ಣನವರು ತಾವು ಮಾತ್ರ ಬೆಳೆಯದೆ ಸಕಲ ಜನಾಂಗವನ್ನು ಬೆಳೆಸಲು ಪ್ರಯತ್ನಿಸಿದುದರಿಂದ ವಿಶ್ವಗುರುವಾದರು. ಶರಣರ ವಚನಗಳು ಬದುಕಿಗೆ ದಾರಿ ದೀಪವಾಗಿದ್ದು, ಅವುಗಳನ್ನು ಕೇವಲ ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೆ ಬದುಕನ್ನು ರೂಪಿಸಿಕೊಳ್ಳಲು ಅಳವಡಿಸಿಕೊಂಡಿದ್ದೇ ಆದರೆ ಆದರ್ಶ ವ್ಯಕ್ತಿಗಳಾಗಿ ದೇಶಕ್ಕೆ ಕೀರ್ತಿ ತರುತ್ತಾರೆ ಎಂದು ಹೇಳಿದರು.ನಂತರ ವಚನ ವಾಚನ ಮಾಡಿದ 25 ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ವಚನದೀವಿಗೆ ಪ್ರಮಾಣಪತ್ರ ಮತ್ತು ವಚನ ಪುಸ್ತಕ ವಿತರಿಸಲಾಯಿತು.
ದತ್ತಿ ದಾಸೋಹಿ ಪ್ರೇಮ ಪ್ರಭುಸ್ವಾಮಿ, ಫೌಂಡೇಷನ್ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ವಾಜಂತ್ರಿ, ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ, ಉಪಾಧ್ಯಕ್ಷರಾದ ಶಿವಪುರ ಉಮಾಪತಿ, ಉಷಾ ನಾಗೇಶ್, ಕಾರ್ಯದರ್ಶಿ ಅನಿತಾ, ನಾಗರಾಜ್, ಮುಖ್ಯ ಶಿಕ್ಷಕ ಟಿ.ಎಸ್. ಪ್ರಭುಸ್ವಾಮಿ, ಶಿಕ್ಷಕರಾದ ಶೀಲಾ, ಶಿವಮ್ಮ ಇದ್ದರು.