ಶೈಕ್ಷಣಿಕ ವ್ಯವಸ್ಥೆಗೆ ನವೀನ ಬೋಧನೆ ಅಗತ್ಯ

| Published : Oct 20 2024, 02:04 AM IST / Updated: Oct 20 2024, 02:05 AM IST

ಶೈಕ್ಷಣಿಕ ವ್ಯವಸ್ಥೆಗೆ ನವೀನ ಬೋಧನೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ನವೀನ ಬೋಧನೆ ಮತ್ತು ಕಲಿಕಾ ಪ್ರವೃತ್ತಿಗಳನ್ನು ತಂತ್ರಜ್ಞಾನದ ರೂಪಾಂತರದೊಂದಿಗೆ ಬಳಸುವ ಅನಿವಾರ್ಯತೆ ಇದೆ ಎಂದು ಕ್ಷೇತ್ರದ ಶಾಸಕ ಬಿ. ವೈ ವಿಜಯೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಶಿಕ್ಷಣದಲ್ಲಿ ಹೊಸ ಪ್ರವೃತ್ತಿಗಳು ಮತ್ತು ಆಧುನಿಕ ವಿಧಾನಗಳು’ ಎಂಬ ವಿಷಯದ ಕುರಿತು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಪ್ರಕಾರ ಕೌಶಲ್ಯ ಆಧಾರಿತ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ನೀಡಬೇಕು ಎಂಬುದು ಎಲ್ಲರ ಆಶಯವಾಗಿದೆ. 21ನೇ ಶತಮಾನದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ಬಯಸುವ ಈ ಸಂದರ್ಭದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಶೋಧನೆಗಳು ಮತ್ತು ಅವುಗಳಿಂದ ಹೊರಬಂದ ಫಲಿತಾಂಶಗಳನ್ನು ಪರಿಗಣಿಸಬೇಕು ಎಂದು ಹೇಳಿದರು.

ದೇಶದ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಕಲಿಕೆಯಲ್ಲಿ ಗುಣಮಟ್ಟ ಸಾಧಿಸಲು ಉದಯೋನ್ಮುಖ ಶೈಕ್ಷಣಿಕ ತಂತ್ರಜ್ಞಾನಗಳ ಅರಿವನ್ನು ಹಿಂಬಾಲಿಸಿ, ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಗೆ ಒತ್ತನ್ನು ನೀಡುವ ಮೂಲಕ ಶಿಕ್ಷಣ ಮತ್ತು ಶಿಕ್ಷಕರ ವೃತ್ತಿಪರ ಅಭಿವೃದ್ಧಿಯಲ್ಲಿ ಭವಿಷ್ಯದ ಪ್ರವೃತ್ತಿಗಳನ್ನು ಮೇಳೈಸಿ ಪಠ್ಯಕ್ರಮದ ನಾವೀನ್ಯತೆ ಮತ್ತು ವಿನ್ಯಾಸವನ್ನು ಮರು ಹೊಂದಿಸುವ ಅನಿವಾರ್ಯತೆ ಇದೆ ಎಂದರು.

ಜಗತ್ತು ವಿಶಾಲವಾದಂತೆ ಮಕ್ಕಳು ಮತ್ತು ಪೋಷಕರ ಆಲೋಚನೆಯಲ್ಲಿ ಸಂಕುಚಿತ ಮನೋಧೋರಣೆಯ ಸ್ವಭಾವದ ಲಕ್ಷಣಗಳು ಗೋಚರಿಸುತ್ತಿವೆ. ಮಕ್ಕಳ ಭವಿಷ್ಯದ ಭದ್ರ ಬುನಾದಿಗಾಗಿ ಶಿಕ್ಷಣದಲ್ಲಿ ಬದಲಾವಣೆ ಕಂಡುಕೊಳ್ಳುವುದಕ್ಕೆ ಸಮ್ಮೇಳನಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ವೇದಿಕೆಯನ್ನು ನಿರ್ಮಿಸಿಕೊಡಲಿದೆ.

ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಬೋಧಕರು ಎಲ್ಲರೂ ಒಟ್ಟಿಗೆ ಸೇರಿ ಚರ್ಚಿಸಿ ಸೂಕ್ತವಾಗಿರುವುದನ್ನು ಆಯ್ದು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಸ್ತುತ ಎರಡು ದಿನಗಳ ಶೈಕ್ಷಣಿಕ ಸಮ್ಮೇಳನ ಸಫಲವಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮ್ಮೇಳನದ ಕುರಿತಾದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ.ಶಿವಕುಮಾರ್, ಕ್ಯಾಲಿಕಟ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ.ಅಬ್ದುಲ್ ಗಫೂರ್, ಶಿಕ್ಷಣ ತಜ್ಞ ಡಾ.ಎಚ್.ವಿ ವಾಮದೇವಪ್ಪ, ಕರ್ನಾಟಕ ರಾಜ್ಯ ಅನುದಾನಿತ ಬಿಇಡಿ ಕಾಲೇಜುಗಳ ಸಂಘದ ಅಧ್ಯಕ್ಷೆ ಡಾ.ಬಿ.ಪಿ.ಮಧುಮತಿ, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಕೆ.ಎಸ್.ಪ್ರಾಚಾರ್ಯ ಡಾ.ಶಿವಕುಮಾರ್ ಸೇರಿದಂತೆ ವಿವಿಧ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳು, ಬೋಧಕರು, ಸಿಬ್ಬಂದಿ ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.