- ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಪ್ರವಾಸ ಬಸ್‌ಗಳಿಗೆ ಚಾಲನೆ ನೀಡಿ ಎಚ್‌.ಬಿ.ಮಂಜಪ್ಪ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಕ್ಕಳ ಶಿಕ್ಷಣದ ಜೊತೆಯಲ್ಲಿಯೇ ಐತಿಹಾಸಿಕ ಸ್ಥಳಗಳ ಶೈಕ್ಷಣಿಕ ಪ್ರವಾಸ ಕೂಡ ಹೆಚ್ಚು ಪೂರಕವಾಗಿರುತ್ತದೆ. ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ನಮ್ಮ ನಾಡಿದ ಇತಿಹಾಸ ಅರಿಯಲು ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಸರ್ಕಾರ ಪ್ರತಿವರ್ಷ ಕರ್ನಾಟಕ ದರ್ಶನ ಕಾರ್ಯಕ್ರಮದಡಿ ಪ್ರವಾಸ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹೇಳಿದರು.

ಪಟ್ಟಣದ ಹಿರೇಕಲ್ಮಠದ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ಕರ್ನಾಟಕ ಶೈಕ್ಷಣಿಕ ಪ್ರವಾಸಕ್ಕೆ ಹೊರಟ ವಿದ್ಯಾರ್ಥಿಗಳ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಶುಭ ಕೋರಿ ಅವರು ಮಾತನಾಡಿದರು. ಕರ್ನಾಟಕ ದರ್ಶನ ಮೂಲಕ ನಾಡಿನ ಇತಿಹಾಸ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಈ ಉದ್ದೇಶದ ಹಿನ್ನೆಲೆ ಸರ್ಕಾರ ಬಡ ಪರಿಶಿಷ್ಟ ಮತ್ತು ಪರಿಶಿಷ್ಟ ವರ್ಗದ ಆಯ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಖರ್ಚಿನಲ್ಲೇ ಪ್ರವಾಸೋಧ್ಯಮ ಇಲಾಖೆ ಸಹಯೋಗದಲ್ಲಿ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.


ವಿದ್ಯಾರ್ಥಿಗಳ ಜತೆ ಮಾರ್ಗದರ್ಶಿ ಶಿಕ್ಷಕರು ವಿದ್ಯಾರ್ಥಿಗಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಂಡು ಸುರಕ್ಷಿತವಾಗಿ ಕರೆದುಕೊಂಡು ಬರಬೇಕು. ಅದು ನಿಮ್ಮ ಜವಾಬ್ದಾರಿ ಎಂದು ಮಾರ್ಗದರ್ಶಿ ಶಿಕ್ಷಕರಿಗೆ ಸಲಹೆ ನೀಡಿದರು.

ಬಿಇಒ ಕೆ.ಟಿ. ನಿಂಗಪ್ಪ ಮಾತನಾಡಿ, ಪ್ರತಿ ವರ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಕೋಟ್ಯಂತರ ಹಣವನ್ನು ಸರ್ಕಾರ ಖರ್ಚು ಮಾಡುತ್ತದೆ. ಈ ಯೋಜನೆ ಸಾಕಾರ ಆಗಬೇಕಾದರೆ ಪ್ರವಾಸದ ಕಾಲದಲ್ಲಿ ನೀವುಗಳು ಬೇರೆ ಕಡೆ ಗಮನ ಕೊಡದೇ ಎಲ್ಲವನ್ನೂ ಅಧ್ಯಯನ ಮಾಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 88 ವಿದ್ಯಾರ್ಥಿಗಳಿಗೆ ಪ್ರವಾಸಕ್ಕೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಸರ್ಕಾರ ನೀಡಿರುವ ಪ್ರವಾಸದ ಯೋಜನೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಇಸಿಒ ಹನುಮಂತಪ್ಪ ಮಾತನಾಡಿ, ಹೊನ್ನಾಳಿಯಿಂದ ಜೋಗ ಜಲಪಾತ ಮುರ್ಡೇಶ್ವರ, ಉಡುಪಿ, ಭಾಗಮಂಡಲ, ಮೈಸೂರು ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ವಿದ್ಯಾರ್ಥಿಗಳು ಭೇಟಿ ನೀಡಿ ತಮ್ಮ ವಿದ್ಯಾಭ್ಯಾಸಕ್ಕೆ ಬೇಕಾದ ಮಾಹಿತಿ ಪಡೆಯಲಿದ್ದಾರೆ ಎಂದರು.

ಟ್ರಾವೆಲ್ ಕಿಟ್‌: ಶೈಕ್ಷಣಿಕ ಪ್ರವಾಸ ಕೈಗೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮವಾದ ಬ್ಯಾಗ್, ಟಿ-ಶರ್ಟ್, ಟೋಪಿ, ಪೆನ್, ಪುಸ್ತಕ ಹಾಗೂ ಬೆಳಗಿನ ನಿತ್ಯೋಪಯೋಗಿ ವಸ್ತುಗಳ ಸಮೇತ ಪ್ರವಾಸೋಧ್ಯಮ ಇಲಾಖೆಯಿಂದ ಟ್ರಾವೆಲ್ ಕಿಟ್ ವಿತರಿಸಲಾಯಿತು.

ಚಂದ್ರಶೇಖರ್, ಕುಮಾರ್‌ ನಾಯ್ಕ, ಪ್ರವಾಸ ಮಾರ್ಗದರ್ಶಿ ಸಚಿನ್, ಶಿಕ್ಷಕರಾದ ಶಿವಕಾಂತ ನಾಯ್ಕ್, ಚಂದ್ರಪ್ಪ, ಸುನಿತಾ ಬಾರ್ಕಿ, ದೀಪಾ, ಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

- - -

-6ಎಚ್.ಎಲ್.ಐ2:

ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೊರಟ ಬಸ್‌ಗಳಿಗೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಹಸಿರು ನಿಶಾನೆ ತೋರಿಸಿದರು. ಬಿಇಒ ನಿಂಗಪ್ಪ, ಶಿಕ್ಷಣ, ಪ್ರವಾಸೋದ್ಯಮ ಇಲಾಖೆಗಳ ಅಧಿಕಾರಿಗಳು ಇದ್ದರು.