ನಕ್ಷಾ ಯೋಜನೆ ಪರಿಣಾಮಕಾರಿಯಾಗಿ ಜಾರಿ: ಬಸವರಾಜ್‌

| Published : May 22 2025, 01:24 AM IST

ಸಾರಾಂಶ

ಚಿಕ್ಕಮಗಳೂರು, ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿ ಆಸ್ತಿಗಳನ್ನು ಡ್ರೋನ್ ಸರ್ವೆ ಮೂಲಕ ಗಣಕೀಕರಣಗೊಳಿಸಿ ಸಂಪೂರ್ಣ ಮಾಹಿತಿ ಯನ್ನು ಒಳಗೊಂಡ ದಾಖಲೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಕ್ಷಾ ಯೋಜನೆಯನ್ನು ಪರಿಣಾಮಕಾರಿಯಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.

ಸರ್ವೆ ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ ರೀತಿ ಆಸ್ತಿಗಳನ್ನು ಡ್ರೋನ್ ಸರ್ವೆ ಮೂಲಕ ಗಣಕೀಕರಣಗೊಳಿಸಿ ಸಂಪೂರ್ಣ ಮಾಹಿತಿ ಯನ್ನು ಒಳಗೊಂಡ ದಾಖಲೆ ಸಿದ್ದಪಡಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಕ್ಷಾ ಯೋಜನೆಯನ್ನು ಪರಿಣಾಮಕಾರಿಯಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪೌರಾಯುಕ್ತ ಬಿ.ಸಿ. ಬಸವರಾಜ್ ತಿಳಿಸಿದರು.ನಗರಸಭೆ ಸಭಾಂಗಣದಲ್ಲಿ ನಕ್ಷಾ ಯೋಜನೆ ಬಗ್ಗೆ ಸರ್ವೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಗರದ ಅಭಿವೃದ್ಧಿಗೆ ಬೇಕಾಗುವ ಪೂರಕ ದಾಖಲಾತಿಗಳನ್ನು ಗಣಕೀಕರಣಗೊಳಿಸಿ ಪ್ರತೀ ಬಿಲ್ಡಿಂಗ್, ರಸ್ತೆ, ವಿದ್ಯುತ್ ಕಂಬ, ಚರಂಡಿ, ಸ್ಮಶಾನ, ಕೆರೆ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಆಸ್ತಿಗಳ ಜೊತೆಗೆ ಖಾಸಗಿ ಆಸ್ತಿಗಳನ್ನು ಈ ಯೋಜನೆಯಡಿ ಗಣಕೀಕರಣಗೊಳಿಸಿದರೆ ಸಂಪೂರ್ಣ ಮಾಹಿತಿ ಖಾತೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಿದರು.

ನಗರದ ಅಭಿವೃದ್ಧಿಗೆ ಸಂಪೂರ್ಣ ಮಾಹಿತಿ ದೊರೆಯುವುದರಿಂದ ಈ ಸರ್ವೆ ನಿಗದಿತ ಸಮಯಕ್ಕೆ ಮುಕ್ತಾಯಗೊಳಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದು ತಿಳಿಸಿದರು.ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ವಿವರಗಳನ್ನು ಮನೆಗೆ ಬರುವ ಸರ್ವೆ ಅಧಿಕಾರಿಗಳಿಗೆ ನೀಡುವ ಮೂಲಕ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದ ಅವರು, ಈ ಸರ್ವೆ ಕಾರ್ಯವನ್ನು ಡಿಸೆಂಬರ್ ಮಾಹೆ ಒಳಗೆ ಪೂರ್ಣಗೊಳಿಸಬೇಕೆಂದು ಸರ್ಕಾರ ಆದೇಶ ನೀಡಿದೆ ಎಂದು ವಿವರಿಸಿದರು.ಭೂ ದಾಖಲೆ ಇಲಾಖೆ ಸಹಾಯಕ ನಿರ್ದೇಶಕ ರುದ್ರೇಶ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಕ್ಷಾ ಯೋಜನೆ ಯಡಿ ರಾಜ್ಯದ ಹತ್ತು ನಗರ ಸ್ಥಳೀಯ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಚಿಕ್ಕಮಗಳೂರು ನಗರಸಭೆಯೂ ಸೇರ್ಪಡೆಯಾಗಿದೆ ಎಂದು ತಿಳಿಸಿದರು.3-ಡಿ ಮಾದರಿಯಲ್ಲಿ ಸರ್ವೆ ಮಾಡಿ ನಗರಸಭೆ ವ್ಯಾಪ್ತಿ ಆಸ್ತಿಗಳ ವಿವರ ಪಡೆಯಲಿದ್ದು, ಹಾಲಿ ನಗರಸಭೆಯಲ್ಲಿ 35 ಸಾವಿರ ವಿವಿಧ ರೀತಿ ಆಸ್ತಿಗಳು ಇವೆ. ಈ ಒಂದು ನಕ್ಷಾ ಯೋಜನೆಯಡಿ ನಗರಸಭೆ ವ್ಯಾಪ್ತಿಯ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನದ ಡ್ರೋನ್ ಮೂಲಕ ಚಿತ್ರೀಕರಿಸಲು 8 ತಂಡಗಳನ್ನು ರಚಿಸಲಾಗಿದೆ ಎಂದರು.ಪ್ರತಿ ಆಸ್ತಿಗಳ ಬೌಂಡರಿ ಅಳತೆ ಮಾಡಿ ಕೆರೆ, ಕಾಲುವೆ, ಸರ್ಕಾರಿ ಆಸ್ತಿಗಳ ಜೊತೆಗೆ ಖಾಸಗಿ ಸಾರ್ವಜನಿಕರ ಆಸ್ತಿಗಳನ್ನು ಸಮರ್ಪಕವಾಗಿ ಅಳತೆ ಮಾಡಿ ಈಗಾಗಲೇ ನಗರಸಭೆ ಕಣಜ ಸಾಫ್ಟ್‌ವೇರ್‌ನಲ್ಲಿ ಐಡಿ ಇದ್ದು, ಲಿಂಕ್ ಮಾಡಿ ಅಳತೆ ಮಾಡಲಾಗುವುದೆಂದು ಹೇಳಿದರು.ಆಸ್ತಿಯ ಎಲ್ಲಾ ವಿವರಗಳು ಡ್ರೋನ್‌ನಲ್ಲಿ ಚಿತ್ರೀಕರಣಗೊಂಡಾಗ ಒಟ್ಟಾರೆ ಇಮೇಜ್ ಬಂದಿರುತ್ತದೆ. ಅದನ್ನು ರೋವರ್ ಸರ್ವೆಯಲ್ಲಿಟ್ಟುಕೊಂಡು ಪ್ರತೀ ಆಸ್ತಿಗೆ ಪಾಲಿಗನ್ ಸಿದ್ಧಪಡಿಸುತ್ತೇವೆ. ನಂತರ ಪಿಆರ್ ಕಾರ್ಡ್‌ಗೆ ಮಾಹಿತಿಯನ್ನು ಲಿಂಕ್ ಮಾಡುತ್ತೇವೆ ಎಂದರು.ಈ ರೀತಿ ಮಾಹಿತಿ ಸಂಗ್ರಹವಾದ ಪಿಆರ್ ಕಾರ್ಡನ್ನು ಆಸ್ತಿ ಹೊಂದಿರುವ ಸಾರ್ವಜನಿಕರಿಗೆ ವಿತರಿಸುತ್ತೇವೆ. ಕಾರ್ಡ್ ಪಡೆದ ಬಳಿಕ ಏನಾದರೂ ಆಕ್ಷೇಪಣೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸರಿ ಯಾದ ಮಾಹಿತಿ ದೊರಕಿದೆ ಎಂದು ದೃಢಪಟ್ಟಾಗ ಅಂತಿಮ ಖಾತೆದಾರರಿಗೆ ಪಿಆರ್ ಕಾರ್ಡ್ ವಿತರಿಸುತ್ತೇವೆ ಎಂದು ಹೇಳಿದರು.ಪಿಆರ್ ಕಾರ್ಡ್‌ನಲ್ಲಿ ದಾಖಲಾದ ಸಮಗ್ರ ಮಾಹಿತಿ ಭೂಮಿ ಯಾವ ಭಾಗದಲ್ಲಿ ಯಾವ ಸ್ಥಿತಿಯಲ್ಲಿ ನಮ್ಮ ಆಸ್ತಿಯಿದೆ ಎಂಬ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಇದುವರೆಗೆ ಆಸ್ತಿಗಳಿಗೆ ಸರ್ವೆ ನಂಬರ್ ಮಾತ್ರ ಇದ್ದು, ಆಸ್ತಿ ಎಲ್ಲಿದೆ ಎಂಬ ಮಾಹಿತಿ ಇರಲಿಲ್ಲ, ಪಿಆರ್ ಕಾರ್ಡ್‌ನಲ್ಲಿ ಆಸ್ತಿ ಬಗ್ಗೆ ಖಾತೆದಾರನ ವಿವರ ಮತ್ತಿತರ ಸಮಗ್ರ ಮಾಹಿತಿ ಇರುತ್ತದೆ ಎಂದು ತಿಳಿಸಿದರು.

21 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆ ಸಭಾಂಗಣದಲ್ಲಿ ನಕ್ಷಾ ಯೋಜನೆಯ ಬಗ್ಗೆ ಸರ್ವೆ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಪೌರಾಯುಕ್ತ ಬಿ.ಸಿ. ಬಸವರಾಜ್‌, ಎಡಿಎಲ್‌ಆರ್‌ ರುದ್ರೇಶ್‌ ಇದ್ದರು.