ಮಕ್ಕಳ ರಕ್ಷಣಾ ನೀತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ನ್ಯಾ. ಕಿರಣ್ ಎಸ್. ಗಂಗಣ್ಣವರ್

| Published : Sep 12 2024, 01:47 AM IST

ಮಕ್ಕಳ ರಕ್ಷಣಾ ನೀತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ನ್ಯಾ. ಕಿರಣ್ ಎಸ್. ಗಂಗಣ್ಣವರ್
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ನೀತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮಕ್ಕಳ ರಕ್ಷಣೆಗೆ ಹಲವಾರು ಕಾನೂನು ಹಾಗೂ ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಹೇಳಿದರು.ಅವರು ಮಂಗಳವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ನೀತಿಗೆ ಸಂಬಂಧಪಟ್ಟ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಮಿಷನ್ ವಾತ್ಸಲ್ಯ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015, ತಿದ್ದುಪಡಿ 2021, ದತ್ತು ಅಧಿನಿಯಮ -2022, ಪೋಕ್ಸೋ ಕಾಯ್ದೆ-2012, ಬಾಲ್ಯವಿವಾಹ ನಿಷೇಧ ಕಾಯ್ದೆ-2006, ಮಕ್ಕಳ ರಕ್ಷಣಾ ಸಮಿತಿ ರಚನೆ ಹಾಗೂ ಕಾರ್ಯವೈಖರಿ ಕುರಿತು ಒಂದು ದಿನದ ತರಬೇತುದಾರರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ವ್ಯಕ್ತಿಯ ವ್ಯಕ್ತಿತ್ವದ ನಿರ್ಮಾಣದಲ್ಲಿ ಬಾಲ್ಯದ ಜೀವನ ಅನುಭವ ಪ್ರಮುಖ ಪಾತ್ರ ವಹಿಸುತ್ತದೆ. ಬಾಲ್ಯ ಜೀವನವನ್ನು ಕಳೆದುಕೊಂಡ ವ್ಯಕ್ತಿಯ ವ್ಯಕ್ತಿತ್ವಕ್ಕಿಂತ ಸಮಾಜದ ಕಟ್ಟುಪಾಡುಗಳನ್ನು ಅರಿತು ಬೆಳೆದಂತಹ ವ್ಯಕ್ತಿಯು ಸಾಮಾಜಿಕ ಜೀವನದಲ್ಲಿ ಹೆಚ್ಚು ಯಶಸ್ಸು ಕಂಡುಕೊಂಡಿದ್ದನ್ನು ನೋಡಿದ್ದೇವೆ. ಬಾಲ್ಯದ ಜೀವನಕ್ಕೆ ಪೂರಕವಾದ ವಾತಾವರಣ ಕಲ್ಪಿಸಿದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ, ಮಕ್ಕಳ ರಕ್ಷಣಾ ನೀತಿಯಲ್ಲಿ ಮಕ್ಕಳ ಆರೈಕೆ ಮತ್ತು ಪುನರ್ವಸತಿಗೆ ಒತ್ತು ನೀಡಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಇವುಗಳಲ್ಲಿ ಹಲವು ನಿಬಂಧನೆಗಳು ಇವೆ. ಮಕ್ಕಳ ಪುನರ್ವಸತಿ ಕೇಂದ್ರದಲ್ಲಿರುವ ಸೌಲಭ್ಯ ಹಾಗೂ ಕರ್ತವ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದು, ತರಬೇತುದಾರರು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗುವಿನ ಬೆಳವಣಿಗೆಯಲ್ಲಿ ಸಾಮಾಜೀಕರಣ ಪ್ರಕ್ರಿಯೆಯು ಮಹತ್ತರ ಪಾತ್ರ ವಹಿಸುತ್ತದೆ. ಅದು ಮಗುವು ಉತ್ತಮ ವ್ಯಕ್ತಿಯಾಗಿ ಅಥವಾ ಸಮಾಜಘಾತುಕ ವ್ಯಕ್ತಿಯಾಗಿ ರೂಪಿಸುವ ಸಾಧ್ಯತೆಗಳಿದ್ದು, ಅಂತಹ ಯಾವುದೇ ಅಹಿತಕರ ಘಟನೆಗಳು / ಬೆಳವಣಿಗೆ ನಡೆಯದಂತೆ ಪೋಷಕರು ಹಾಗೂ ಸಮಾಜ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಪುರುಷೋತ್ತಮ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಜಿಲ್ಲಾ ಬಾಲನ್ಯಾಯ ಮಂಡಳಿಯ ಪ್ರಧಾನ ನ್ಯಾಯಾಧೀಶ ಮನು ಪಟೇಲ್ ಬಿ.ವೈ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಪೊಲೀಸ್ ಸಿಬ್ಬಂದಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಯುನಿಸೆಫ್ ಕೊಪ್ಪಳ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ. ರಾಘವೇಂದ್ರ ಭಟ್ ಮತ್ತು ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯ ಮನಶಾಸ್ತ್ರ ವಿಭಾಗದ ಸಹಾಯಕ ಭೋಧಕಿ ಡಾ.ವೀಣಾಶ್ರೀ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಕ್ಕಳ ರಕ್ಷಣೆಯ ಕಾನೂನು, ಸರಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್ ಸ್ವಾಗತಿಸಿ, ಚೈಲ್ಡ್ ಲೈನ್‌ನ ಯೋಜನಾ ಸಂಯೋಜಕ ಜ್ಯೋತಿ ನಿರೂಪಿಸಿ ವಂದಿಸಿದರು.