ಸಾರಾಂಶ
ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಎಂಬುದನ್ನು ತಿಳಿಸುವ ಮೂಲಕ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು.
ಕುಷ್ಟಗಿ:
ಮಾದಕ ವಸ್ತುಗಳ ಸೇವನೆಗೆ ಒಮ್ಮೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಹೇಶ ಹಡಪದ ಹೇಳಿದರು.ಪಟ್ಟಣದ ಮುಲ್ಲಾರ ಓಣಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಸ್ವ-ಸಹಾಯ ಸಂಘದ ಸದಸ್ಯರಿಗೆ ನಡೆದ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಎಂಬುದನ್ನು ತಿಳಿಸುವ ಮೂಲಕ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ಮದ್ಯ, ತಂಬಾಕು, ಡ್ರಗ್ಸ್, ಗಾಂಜಾ, ಅಫೀಮು ಇನ್ನಿತರ ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಎಚ್ಚರಿಸಿದ ಅವರು, ಸದೃಢವಾದ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಒಳ್ಳೆಯ ನಾಗರಿಕತೆ ಮೂಡಿಸಲು, ಮನೆಯೇ ಮೊದಲು ಪಾಠಶಾಲೆಯಾಗಿದೆ. ಪಾಲಕರು ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು.ಜ್ಞಾನವಿಕಾಸ ವಿಕಾಸ ಸಮನ್ವಯಾಧಿಕಾರಿ ರೂಪಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವ-ಸಹಾಯ ಸಂಘಗಳಿಗೆ ಸಾಲ ನೀಡುವ ಮೂಲಕ ಅನೇಕ ಅಭಿವೃದ್ಧಿ ಪರವಾದ ಕಾರ್ಯಕ್ರಮ ಆಯೋಜಿಸಿವೆ ಎಂದರು.
ಈ ವೇಳೆ ಕುಷ್ಟಗಿ ವಲಯ ಮೇಲ್ವಿಚಾರಕ ಬಿ. ಅರುಣ್, ಸೇವಾಪ್ರತಿನಿಧಿಗಳಾದ ಶಾಂತಾ, ಜಯಶ್ರೀ, ಒಕ್ಕೂಟ ಅಧ್ಯಕ್ಷರು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.