ಕನ್ನಡಪ್ರಭ ವಾರ್ತೆ ಹಳಿಯಾಳ
ಪರಿಶ್ರಮಕ್ಕೆ ಪರ್ಯಾಯವಿಲ್ಲ. ಪ್ರತಿದಿನದ ನಮ್ಮ ಸಣ್ಣ ಪ್ರಯತ್ನಗಳೇ ಭವಿಷ್ಯದ ದೊಡ್ಡ ಸಾಧನೆಗಳಿಗೆ ದಾರಿ ಮಾಡಿಕೊಡುತ್ತವೆ ಎಂದು ಹಳಿಯಾಳ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಡಾ. ಬಿ.ಕೆ. ಪದ್ಮಕ್ಕ ಹೇಳಿದರು.ಪಟ್ಟಣದ ಶಿವಾಜಿ ಗಲ್ಲಿಯಲ್ಲಿರುವ ಶಿವಾನುಭೂತಿ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ವಿಶ್ವ ಸಂಸ್ಕೃತಿ ಫೌಂಡೇಶನ್ ಹಾಗೂ ಹೊಂಗಿರಣ ಸಂಸ್ಥೆ ಹಳಿಯಾಳ ಇವರ ಸಹಯೋಗದಲ್ಲಿ ಆಯೋಜಿಸಿದ ಸಾಧಕರ ಸನ್ಮಾನ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಈಶ್ವರೀಯ ಸನ್ಮಾನ ಹಾಗೂ ನರ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಅಭ್ಯಾಸ, ಶಿಸ್ತು ಹಾಗೂ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಅಂಕಗಳನ್ನು ಗಳಿಸಿ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.ತಾಲೂಕ ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೂಪಾ ತುರಮುರಿ ಡೆಂಘೀ ಜ್ವರದ ಕುರಿತು ಮಾಹಿತಿ ನೀಡಿದರು. ವಿಶ್ವ ನರ್ಸ್ ದಿನಾಚರಣೆಯ ಅಂಗವಾಗಿ ಹಳಿಯಾಳದ ಖ್ಯಾತ ವೈದ್ಯ ಡಾ. ವಿದ್ಯಾರಣ್ಯ ಐತಾಳ ಉಪನ್ಯಾಸ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಕ್ಷೀಪ್ತ ಪರಿಚಯವನ್ನು ಅಳ್ನಾವರ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ. ರಾಜೇಶ್ವರಿ ಅಕ್ಕನವರು ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದಲ್ಲಿ ನೋಂದಣಿಯಾಗಿರುವ ವಿಶ್ವ ಸಂಸ್ಕೃತಿ ಪೌಂಡೇಶನ್ ಸಂಸ್ಥೆಯನ್ನು ಉದ್ಘಾಟಿಸಲಾಯಿತು.
ಸನ್ಮಾನ: ಹಳಿಯಾಳ ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ವಿವಿಧ ಗ್ರಾಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸಗಳನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳನ್ನು ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿವಿಧ ಕಾಲೇಜುಗಳಲ್ಲಿ ಪ್ರಥಮ ಸ್ಥಾನಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹೊಂಗಿರಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯ ಅಧ್ಯಕ್ಷೆ ಸುಜಾತಾ ಬಿರಾದಾರ, ಆರೋಗ್ಯ ಇಲಾಖೆಯ ಸಿಬ್ಬಂದಿ ತೇಜಸ್ವಿ ಹಾಗೂ ಇತರರು ಇದ್ದರು.ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷೆ ಭಾರತಿ ಗೊಂದಳೆ ಭಕ್ತಿಗೀತೆ ಹಾಡಿದರು. ಶಿಕ್ಷಕ ಸಿದ್ದಪ್ಪ ಬಿರಾದಾರ, ರಾಜಯೋಗಿನಿ ಬಿ.ಕೆ. ಲಕ್ಷ್ಮೀ ಅಕ್ಕ ಕಾರ್ಯಕ್ರಮ ನಿರ್ವಹಿಸಿದರು.