ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರತಿಫಲದ ನಿರೀಕ್ಷೆಯಿಲ್ಲದ ಪ್ರಯತ್ನಕ್ಕೆ ಎಂದಿಗೂ ಜಯ ಇದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಹಾಗೂ ಪದ್ಮಶ್ರೀ ಪುರಸ್ಕೃತ ಡಾ. ಬಿ. ಎನ್. ಗಂಗಾಧರ್ ಹೇಳಿದರು.ತಾಲೂಕು ವಿಪ್ರ ನೌಕರರ ಸಂಘದ ವತಿಯಿಂದ ಕೋಟೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜೀವನದಲ್ಲಿ ಅನುಶಾಸನಬದ್ಧ ವ್ರತವನ್ನು ಅಳವಡಿಸಿಕೊಳ್ಳಬೇಕು. ಕೇವಲ ವಿದ್ಯೆಯಿಂದಷ್ಟೇ ವೃತ್ತಿ ಅಲ್ಲ. ಯಾವುದೇ ಕ್ಷೇತ್ರದಲ್ಲಿದ್ದರೂ ಕೌಶಲಯುತ ವಿದ್ಯೆ ನಮ್ಮದಾಗಬೇಕು. ಇತರರಿಗೆ ನೋವಾಗದಂತೆ ನಮ್ಮ ವೃತ್ತಿ ಇರಬೇಕು. ಸಮಾಜದಲ್ಲಿ ಸತ್ಪಜೆಯಾಗಿ ಪೂರಕ ಜೀವನ ಮಾಡುವುದನ್ನು ಕಲಿಯಬೇಕು. ರಾಷ್ಟ್ರಕ್ಕಾಗಿ - ನಮ್ಮ ವ್ಯಕ್ತಿತ್ವ ವಿಕಸನವಾಗಬೇಕು. ಆಗ ಮಾತ್ರ ಅದು ಮುಕುಟಪ್ರಾಯವಾಗುತ್ತದೆ ಎಂದು ಅವರು ಹೇಳಿದರು..
ನಮ್ಮ ವ್ಯಾಸಂಗ, ವೃತ್ತಿ, ವ್ಯವಹಾರದ ಜತೆ ತತ್ಪರತೆಯೂ ನಮ್ಮ ಮಂತ್ರವಾಗಬೇಕು. ಆರೋಗ್ಯ ಪಾಲನೆಯತ್ತಲೂ ಆದ್ಯತೆ ನೀಡಬೇಕು. ಮಾನಸಿಕ ಮತ್ತು ಶಾರೀರಿಕ ಸದೃಢತೆಯಿದ್ದರೆ ಪರಿಶ್ರಮ ಸಾಫಲ್ಯತೆಯನ್ನು ಪಡೆಯುತ್ತದೆ. ಭಗವದ್ಗೀತೆಯ ಅಭ್ಯಾಸದ ಮೂಲಕ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಬಹುದು. ಸಮಾಜಮುಖಿ ಜೀವನದ ತಪಸ್ಸಿಗೆ ವಿಶೇಷ ಗಮನವಿರಬೇಕು. ಪ್ರಭಾವಿ ಯುವಸಮುದಾಯವಾಗಬೇಕು ಎಂದು ಹೇಳಿದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಗಣ್ಯರು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಾರ‍್ಯಕ್ರಮಕ್ಕೆ ಸಹಕಾರ ನೀಡಿದವರನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಎಚ್.ಎಂ.ಶ್ರೀಕಂಠ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಸಿ.ಎನ್. ಸುಬ್ರಹ್ಮಣ್ಯ ಮತ್ತಿತರರು ಇದ್ದರು.
-------ಫೋಟೋ ...ಚನ್ನರಾಯಪಟ್ಟಣ ತಾಲೂಕು ವಿಪ್ರ ನೌಕರರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ‍್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಡಾ. ಬಿ.ಎನ್. ಗಂಗಾಧರ್ ನಾನಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.