ಅತಿವೃಷ್ಟಿ ಹಾನಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನ: ಶಾಸಕ ಗೋಪಾಲಕೃಷ್ಣ ಬೇಳೂರು

| Published : Aug 07 2025, 12:45 AM IST

ಅತಿವೃಷ್ಟಿ ಹಾನಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನ: ಶಾಸಕ ಗೋಪಾಲಕೃಷ್ಣ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೃಷ್ಟಿಯಿಂದ ಹಾನಿಯಾಗಿರುವ ಕುರಿತು ಸದಸನದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆದು ಹೆಚ್ಚಿನ ಅನುದಾನವನ್ನು ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಕ್ಷೇತ್ರಕ್ಕೆ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಅತಿವೃಷ್ಟಿಯಿಂದ ಹಾನಿಯಾಗಿರುವ ಕುರಿತು ಸದಸನದಲ್ಲಿ ಚರ್ಚೆ ನಡೆಸಿ ಸರ್ಕಾರದ ಗಮನ ಸೆಳೆದು ಹೆಚ್ಚಿನ ಅನುದಾನವನ್ನು ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಮತ್ತು ಸೊರಬ ಕ್ಷೇತ್ರಕ್ಕೆ ನೀಡಲು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡುತ್ತೇನೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಬಿ.ಎಚ್.ರಸ್ತೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಬಿದ್ದಿರುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ಅತಿವೃಷ್ಟಿಯಿಂದ ತಾಲೂಕಿನಲ್ಲಿ ಪಿಡಬ್ಲ್ಯುಡಿ ಇಲಾಖೆಗೆ ೭೫ ಕೋಟಿ ರು. ಜಿಲ್ಲಾ ಪಂಚಾಯ್ತಿಗೆ ೩೩ ಕೋಟಿ ರು., ಸಣ್ಣ ನೀರಾವರಿ ಇಲಾಖೆಗೆ ೧೭೦ ಕೋಟಿ ರು. ನಷ್ಟವಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ಸುಮಾರು ೩೩ ಕೋಟಿ ರು. ನಷ್ಟವಾಗಿದ್ದು, ನಷ್ಟದ ವರದಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತದೆ ಎಂದರು.

ಪಟ್ಟಣದ ಶಿವಪ್ಪನಾಯಕ ವೃತ್ತದಿಂದ ಸಿಗಂದೂರು ತುಮರಿ ಮೂಲಕ ಮರಕುಟಕ ಸೇರುವ ರಾಷ್ಟ್ರೀಯ ಹೆದ್ದಾರಿ ೩೬೯ಇ ಸರ್ವೆ ಕಾರ್ಯ ಮುಗಿದಿದ್ದು ಕಾಮಗಾರಿ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ರಸ್ತೆ ನಿರ್ಮಾಣದ ಕುರಿತು ಸಣ್ಣಪುಟ್ಟ ಸಮಸ್ಯೆಗಳಿವೆ. ತುಮರಿ ಗ್ರಾಮದೊಳಗಿನಿಂದ ರಸ್ತೆ ಹೋಗಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು ಬೈಪಾಸ್ ನಿರ್ಮಿಸಿ ಎನ್ನುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ೨೦೬ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕಾಮಗಾರಿ ಮುಗಿಸಲು ಸೂಚಿಸಿದೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ೨೩೪ ಕಾಲುಸಂಕ ನಿರ್ಮಿಸಲು ೫೦ ಕೋಟಿ ರು. ಹಣ ಮಂಜೂರಾಗಿದೆ. ಶೀಘ್ರದಲ್ಲಿ ಕಾಮಗಾರಿ ಅನುಷ್ಟಾನಕ್ಕೆ ಗಮನ ಹರಿಸುತ್ತೇವೆ. ಇದರ ಜತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ೫೦ ಕೋಟಿ ರು. ಹಾಗೂ ಪ್ರಗತಿಪಥ ಯೋಜನೆಯಡಿ ೨೦ ಕೋಟಿ ರು. ಮಂಜೂರಾಗಿದೆ. ಸುಮಾರು ೧೨೦ ಕೋಟಿ ರು. ನಮ್ಮ ಬಳಿ ಇದ್ದು, ಅಗತ್ಯ ಅಭಿವೃದ್ದಿ ಕಾರ್ಯ ಕೈಗೊಳ್ಳುತ್ತೇವೆ ಎಂದು ಹೇಳಿದರು.

ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ರವಿ ಲಿಂಗನಮಕ್ಕಿ, ಕಲಸೆ ಚಂದ್ರಪ್ಪ, ಶಾಸಕರ ಕರ್ತವ್ಯಾಧಿಕಾರಿ ರಮೇಶ್ ಟಿ.ಪಿ., ಲೋಕೋಪಯೋಗಿ ಇಲಾಖೆಯ ಅನಿಲಕುಮಾರ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಜರಿದ್ದರು.

ಪ್ರವಾಸ ಸದಸ್ಯರಿಗೆ ಬಿಟ್ಟಿದ್ದು

ನಗರಸಭೆ ಸದಸ್ಯರು ದೆಹಲಿ ಮತ್ತು ಹರಿಯಾಣ ರಾಜ್ಯಗಳಿಗೆ ಪ್ರವಾಸ ಹೋಗುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದ್ದು, ಸಾರ್ವಜನಿಕವಾಗಿ ೪೦ ಲಕ್ಷ ರು. ಖರ್ಚು ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರವಾಸ ಹೋಗುವುದು ಬಿಡುವುದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಬಿಟ್ಟಿದ್ದು. ಪ್ರವಾಸ ಹೋಗಿ, ಹೋಗಬೇಡಿ ಎಂದು ನಾನು ಹೇಳುವುದಿಲ್ಲ ಎಂದು ಶಾಸಕರು ತಿಳಿಸಿದರು.