ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಖಾಸಗಿ ಬಸ್ ನಿಲ್ದಾಣಕ್ಕೆ ಶೀಘ್ರದಲ್ಲೇ ಕಾಯಕಲ್ಪ ನೀಡಲಾಗುವುದು ಎಂದು ಶಾಸಕ ಸಿ.ಪಿ ಯೋಗೇಶ್ವರ್ ತಿಳಿಸಿದರು.ನಗರಸಭಾ ವ್ಯಾಪ್ತಿಯ ೧೦ನೇ ವಾರ್ಡಿನ ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಸಿ.ಸಿ.ರಸ್ತೆ ಕಾಮಗಾರಿಯ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಚನ್ನಪಟ್ಟಣ ಖಾಸಗಿ ಬಸ್ ನಿಲ್ದಾಣದ ವಿಚಾರದಲ್ಲಿ ಗುತ್ತಿಗೆದಾರರು ಸುಪ್ರೀಂಕೊರ್ಟ್‌ಗೆ ಹೋಗಿದ್ದಾರೆ. ಆದಷ್ಟು ಬೇಗ ಅವರನ್ನು ಕರೆಸಿ ಮಾತನಾಡಿ ಅವರನ್ನು ಒಪ್ಪಿಸಿ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲು ತೀರ್ಮಾನ ಮಾಡಲಾಗುವುದು ಎಂದರು.ಚನ್ನಪಟ್ಟಣ ನಗರ ಸುತ್ತ ಹಲವಾರು ರೆವಿನ್ಯೂ ಬಡಾವಣೆಗಳು, ಖಾಸಗಿ ಬಡಾವಣೆಗಳು ಆಗಿವೆ. ಅವೆಲ್ಲವಕ್ಕೂ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವಿ ಮಾಡಿದ್ದೇನೆ. ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಲು ಹಾಗೂ ಉತ್ಪತ್ತಿಯಾಗುವ ತ್ಯಾಜ್ಯ ಮತ್ತು ನೀರು ಹೊರ ಹೋಗಲು ₹100 ಕೋಟಿ ಅನುದಾನ ಕೇಳಿದ್ದೇವೆ, ಅವರು ಒಪ್ಪಿಕೊಂಡಿದ್ದಾರೆ, ಆದ್ದರಿಂದ ರೆವಿನ್ಯೂ ಎಸ್ಟಿಮೇಟ್ ಮಾಡುತ್ತಿದ್ದೇವೆ ಎಂದರು.
ಚನ್ನಪಟ್ಟಣ ನಗರಕ್ಕೆ ಹೊಸರೂಪ ಕೊಡಲು ಇನ್ನೂ ಹಲವಾರು ಯೋಜನೆ ಮಾಡಿಲಾಗಿದೆ, ಅದಕ್ಕೆ ಚಾಲನೆ ನೀಡಲಾಗುತ್ತದೆ. ಇನ್ನು ಎರಡು ವರ್ಷದಲ್ಲಿ ಚನ್ನಪಟ್ಟಣ ನಗರದ ಸೌಂದರ್ಯಕ್ಕೆ ಅನಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒತ್ತುಕೊಟ್ಟು ಕೆಲಸ ಮಾಡುತ್ತಿದ್ದೇವೆ. ಯುಜಿಡಿ ಟೆಂಡರ್ ಆಗಿದ್ದು, ಶೀಘ್ರ ಕೆಲಸ ಆರಂಭವಾಗುತ್ತದೆ. ಎಲ್ಲಾ ಚುನಾಯಿತ ಪ್ರತಿನಿಧಿಗಳು ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ, ನಗರವನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.
ನಗರಸಭಾ ವ್ಯಾಪ್ತಿಯ ೮ನೇ ವಾರ್ಡಿನಲ್ಲಿ ಅಪ್ಪಗೆರೆ ಚಾನೆಲ್ ಮುಖಾಂತರ ಹೌಸಿಂಗ್ ಬೋರ್ಡ್ ಸೇರುವ ರಸ್ತೆಗೆ ಕಾವೇರಿ ನೀರಾವರಿ ನಿಗಮದ ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ, ೨೦ನೇ ವಾರ್ಡಿನ ಕೆರೆಮೇಗಲದೊಡ್ಡಿಯಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಸಿ.ಸಿ.ರಸ್ತೆ ಕಾಮಗಾರಿಯ ನಿರ್ಮಾಣ ಹಾಗೂ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಲೋಕೇಶ್, ನಗರಸಭಾ ಸದಸ್ಯರಾದ ಜಯಮಾಲ, ಸತೀಶ್ ಬಾಬು, ವಾಸಿಲ್ ಅಲಿಖಾನ್, ಸರ್ವಮಂಗಳ ಲೋಕೇಶ್ ಇತರರು ಇದ್ದರು.ಪೊಟೋ೯ಸಿಪಿಟಿ೧: ಚನ್ನಪಟ್ಟಣದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೆ ಶಾಸಕ ಸಿ.ಪಿ.ಯೋಗೇಶ್ವರ್ ಭೂಮಿಪೂಜೆ ನೆರವೇರಿಸಿದರು.