ದಾವಣಗೆರೆಯಿಂದ ಶ್ರೀಶೈಲಕ್ಕೆ ರೈಲು ಸೇವೆಗೆ ಪ್ರಯತ್ನ

| Published : Jul 22 2024, 01:24 AM IST

ಸಾರಾಂಶ

ದಾವಣಗೆರೆಯಿಂದ ಆಂಧ್ರಪ್ರದೇಶದ ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ಹೋಗಿ ಬರುವ ಭಕ್ತರ ಅನುಕೂಲಕ್ಕಾಗಿ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರು, ಇಲಾಖೆ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದ್ದಾರೆ.

- ಬೆಂಗಳೂರಿನ ಶ್ರೀಶೈಲ ಪೀಠ ಧಾರ್ಮಿಕ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆಯಿಂದ ಆಂಧ್ರಪ್ರದೇಶದ ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ಹೋಗಿ ಬರುವ ಭಕ್ತರ ಅನುಕೂಲಕ್ಕಾಗಿ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರು, ಇಲಾಖೆ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.

ಬೆಂಗಳೂರಿನ ಶ್ರೀಶೈಲ ಪೀಠದಲ್ಲಿ ಗುರುವಾರ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀ ಪೀಠದ ಭಕ್ತರ ಕೋರಿಕೆ ಮೇರೆಗೆ ದಾವಣಗೆರೆ-ಮಾರ್ಕಾಪುರ ಮಾರ್ಗವಾಗಿ ರೈಲು ಸಂಚಾರ ಆರಂಭಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವರು, ಕೇಂದ್ರ ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು. ದಾವಣಗೆರೆ- ಶ್ರೀಶೈಲದ ಮಧ್ಯೆ ರೈಲು ಸೇವೆ ಆರಂಭಿಸುವ ಬಗ್ಗೆ ಸದ್ಯಕ್ಕೆ ಶ್ರೀಶೈಲದ ಸಮೀಪದ ಮಾರ್ಕಾಪುರ ರಸ್ತೆವರೆಗೂ ಮಾತ್ರ ರೈಲು ಸೇವೆ ನೀಡಲು ಅವಕಾಶ ಇದೆ. ದಾವಣಗೆರೆಯಿಂದ ನೇರವಾಗಿ ಮಾರ್ಕಾಪುರ ತಲುಪಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ತಲುಪಬೇಕು. ನೇರವಾಗಿ ಶ್ರೀಶೈಲಕ್ಕೆ ರೈಲು ಸಂಚಾರ ಆರಂಭವಾದರೆ ಸಾವಿರಾರು ಭಕ್ತರಿಗೂ ಅನುಕೂಲ. ಇದರಿಂದ ಭಕ್ತರಿಗೆ ಸಮಯ ಉಳಿತಾಯ ಮತ್ತು ದೈಹಿಕ ಶ್ರಮ ಕಡಿಮೆ ಮಾಡಿದಂತಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಪ್ರಭಾ ಹೇಳಿದರು.

ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಯುವ ಮುಖಂಡ ಟಿ.ಆರ್‌.ಪ್ರಶಾಂತ ಇತರರು ಇದ್ದರು.

- - - -21ಕೆಡಿವಿಜಿ1:

ಬೆಂಗಳೂರಿನಲ್ಲಿ ಶ್ರೀಶೈಲ ಪೀಠಕ್ಕೆ ಭೇಟಿಯಿತ್ತ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಆಶೀರ್ವಾದ ಪಡೆದರು.