ಸಾರಾಂಶ
ಅಧಿವೇಶನದ ಶೂನ್ಯ ವೇಳೆಯಲ್ಲಿ ತಾಲೂಕು ಮಟ್ಟದ ಪತ್ರಕರ್ತರ ಸಂಘಟನೆಗಳಿಗೆ ಉಚಿತ ನಿವೇಶನ ಮತ್ತು ಕಚೇರಿ ನಿರ್ಮಾಣಕ್ಕೆ ಅಗತ್ಯ ಧನಸಹಾಯ ನೀಡಲು ಸರ್ಕಾರದ ಗಮನ ಸೆಳೆದು ಆಗ್ರಹಿಸಲಾಗುವುದು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ರಬಕವಿ-ಬನಹಟ್ಟಿ : ಅಧಿವೇಶನದ ಶೂನ್ಯ ವೇಳೆಯಲ್ಲಿ ತಾಲೂಕು ಮಟ್ಟದ ಪತ್ರಕರ್ತರ ಸಂಘಟನೆಗಳಿಗೆ ಉಚಿತ ನಿವೇಶನ ಮತ್ತು ಕಚೇರಿ ನಿರ್ಮಾಣಕ್ಕೆ ಅಗತ್ಯ ಧನಸಹಾಯ ನೀಡಲು ಸರ್ಕಾರದ ಗಮನ ಸೆಳೆದು ಆಗ್ರಹಿಸಲಾಗುವುದು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಭಾನುವಾರ ನಗರಸಭೆ ಸಭಾಭವನದಲ್ಲಿ ಕಾನಿಪ ರಬಕವಿ-ಬನಹಟ್ಟಿ ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಬಡಾವಣೆಗಳ ನಿರ್ಮಾಣದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಕಾಯ್ದಿಟ್ಟ ಜಾಗೆಯಲ್ಲಿ ಪತ್ರಿಕಾ ಭವನ ನಿರ್ಮಿಸಲು ಅವಕಾಶ ಕಲ್ಪಿಸುವಂತೆ ಮತ್ತು ಪತ್ರಿಕೆ ವಿತರಣೆ ಮಾಡುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಸಕಲ ಸೌಲಭ್ಯ ಕಲ್ಪಿಸುವಂತೆ ಸಂಘದ ಹಿರಿಯ ಪತ್ರಕರ್ತ ಶಿವಾನಂದ ಮಹಾಬಲಶೆಟ್ಟಿ ಪ್ರಾಸ್ತಾವಿಕ ಮಾತುಗಳಲ್ಲಿ ಮಾಡಿದ ಮನವಿಗೆ ಸ್ಪಂದಿಸಿ ಉತ್ತರಿಸಿದ ಶಾಸಕ ಸವದಿ ಎರಡು ದಶಕಗಳಿಂದ ಸಂಘದ ಕಚೇರಿಗಾಗಿ ಬೇಡಿಕೆಯಿದ್ದರೂ ಬದಲಾದ ನಿಯಮಗಳಡಿ ಹಣ ಭರಣಾ ಮಾಡುವ ತಿದ್ದುಪಡಿಯಾಗಿದ್ದರಿಂದ ಮತ್ತು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಸೇರ್ಪಡೆಗೊಂಡಿದ್ದರಿಂದ ಸಮಸ್ಯೆ ಜಟಿಲವಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದು ಪತ್ರಕರ್ತರಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಲಾಗುವುದೆಂದರು.
ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ಸಂಘದ ನಿವೇಶನಕ್ಕೆ ಮತ್ತು ಕಚೇರಿ ನಿರ್ಮಾಣಕ್ಕೆ ಸದ್ಯ ₹೧ ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿ, ಹಿಂದಿನ ಆಡಳಿತಾವಧಿಯಲ್ಲಿ ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸದೇ ಇಲ್ಲಸಲ್ಲದ ಕಾರಣ ನೀಡುವುದು ತರವಲ್ಲ. ಲಭ್ಯ ಜಾಗೆ ಗುರುತಿಸಿಕೊಂಡು ಸರ್ಕಾರದ ಮಟ್ಟದಲ್ಲಿ ನಿವೇಶನ ಪಡೆಯಲು ನಿಯೋಗದೊಡನೆ ತಾವು ಪಾಲ್ಗೊಳ್ಳುವುದಾಗಿ ಘೋಷಿಸಿದರು.
ಹಿರಿಯ ಸಾಹಿತಿ ಶಿವಾನಂದ ಬಾಗಲಕೋಟಮಠ ಪತ್ರಕರ್ತರ ಕುರಿತು ವಚನ ವಾಚನ ಮಾಡಿದರು. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹುಲಗಬಾಳಿ ಪತ್ರಿಕೋದ್ಯಮದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡರು. ಜಿಲ್ಲಾ ಕಾನಿಪ ಅಧ್ಯಕ್ಷ ಆನಂದ ಧಲಭಂಜನ ಪತ್ರಿಕೆಗಳು ಜನಮನದ ಜೀವನಾಡಿಯಾಗಿದ್ದು, ಸರ್ಕಾರದ ಮತ್ತು ಸ್ಥಳೀಯ ವೈಫಲ್ಯಗಳನ್ನು ಎತ್ತಿ ತೋರಿಸಿ ಜನಮನದ ಧ್ವನಿಯಾಗಿವೆ. ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪರಿಚಯಿಸುವ ಹಾಗೂ ಸಂವಿಧಾನಯುತ ಸಹ ಜೀವನ ನಡೆಸಲು ನಾಗರಿಕರನ್ನು ಸ್ವಯಂ ಸಿದ್ಧಗೊಳಿಸುತ್ತವೆಂದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ತುಂಗಳ ಉಪಸ್ಥಿತರಿದ್ದರು. ಸ್ಥಳೀಯ ಕಾನಿಪ ಅಧ್ಯಕ್ಷ ವಿಶ್ವಜ ಕಾಡದೇವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಿರಣ ಆಳಗಿ ಸ್ವಾಗತಿಸಿದರು. ರವೀಂದ್ರ ಅಷ್ಟಗಿ, ಯಶವಂತ ವಾಜಂತ್ರಿ ನಿರೂಪಿಸಿದರು. ಪ್ರಕಾಶ ಕುಂಬಾರ ವಂದಿಸಿದರು.
ಸಮಾರಂಭದಲ್ಲಿ ಕಲಾವಿದ ಮಹಾದೇವ ಕವಿಶೆಟ್ಟಿ, ಮಕ್ಕಳ ಸಾಹಿತಿ ಜಯವಂತ ಕಾಡದೇವರ, ಧರೆಪ್ಪ ಉಳ್ಳಾಗಡ್ಡಿ, ಬಸವರಾಜ ದಲಾಲ, ಸುರೇಶ ಚಿಂಡಕ, ಡಾ.ಅಭಿನಂದನ ಡೋರ್ಲೆ, ಡಾ.ವಿನೋದ ಮೇತ್ರಿ, ಡಾ.ಜಿ.ಎಚ್.ಚಿತ್ತರಗಿ, ಡಾ.ಸಂಗಮೇಶ ಹತಪಾಕಿ, ಡಾ.ರವಿ ಜಮಖಂಡಿ, ಚಿದಾನಂದ ಸೊಲ್ಲಾಪುರ, ಗೋಪಾಲ ಭಟ್ಟಡ, ಪ್ರಕಾಶ ಶೆಟ್ಟರ, ಅಭಿಯಂತರ ಚಂದ್ರಶೇಖರ ಮಿರ್ಜಿ ಸೇರಿದಂತೆ ಪತ್ರಕರ್ತರಾದ ಬಸಯ್ಯಾ ವಸ್ತçದ, ಅರುಣ ಯಾದವಾಡ, ಬಿ.ಟಿ.ಪತ್ತಾರ, ಅಮರ ಇಂಗಳೆ, ಬಸವರಾಜ ಪಟ್ಟಣ, ಶಂಭುಲಿAಗ ಗುಣಕಿ, ವಿಶ್ವನಾಥ ಆಳಗಿ, ಮಹಾದೇವ ತೋಟಗೇರ ಮುಂತಾದವರಿದ್ದರು.