ಸಾರಾಂಶ
ಹಾವೇರಿ: ಲಿಂಗತ್ವ ಅಲ್ಪಸಂಖ್ಯಾತರು ಶೋಷಿತರಲ್ಲೇ ಶೋಷಿತರಾಗಿ ಸಮಾಜದಿಂದ ತಳ್ಳಲ್ಪಟ್ಟ ಸಮಾಜವಾಗಿದೆ. ಈ ಸಮಾಜವನ್ನು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸೇವಾ ಸಂಸ್ಥೆ ಮಾಡುತ್ತಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷೆ ತನುಶ್ರೀ ಧಾರವಾಡ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಸಮುದಾಯವು ಸಮಾಜದಿಂದ ತಳ್ಳಲ್ಪಟ್ಟ ಮತ್ತು ಕೌಟುಂಬಿಕ ಬಹಿಷ್ಕಾರದೊಂದಿಗೆ ಜೀವನ ನಡೆಸುತ್ತಿದೆ. ಜಿಲ್ಲೆಯಲ್ಲಿ ಎಷ್ಟೋ ಸಮುದಾಯದವರಿಗೆ ಮೂಲ ಸೌಲಭ್ಯಗಳಾದ ವಸತಿ, ಶಿಕ್ಷಣ, ಆರೋಗ್ಯ ಹೀಗೆ ಹಲವಾರು ಸೌಲಭ್ಯಗಳನ್ನು ಪಡೆಯುವಲ್ಲಿ ಸಂಘಟನೆಯು ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ.
ಈ ಸಂಘಟನೆಯನ್ನು ಜಿಲ್ಲೆಯಲ್ಲಿರುವ ಎಲ್ಲ ಸಮಾನ ಮನಸ್ಕರ ಸಂಘಟನೆಗಳು ತಮ್ಮೊಟ್ಟಿಗೆ ಎಲ್ಲ ಹಂತದಲ್ಲೂ ಮೂಲ ಸೌಲಭ್ಯಗಳನ್ನು ಕೊಡಿಸುವಲ್ಲಿ ಮುಂದಾಗಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬೆಳೆಯಲು ಸಹಾಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಘಟನೆಗೂ ನಮ್ಮ ಸಂಘಟನೆಗೂ ಯಾವುದೇ ರೀತಿಯ ಸಂಬಂಧಗಳಿಲ್ಲ. ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯ ಪ್ರಾಥಮಿಕ ಸದಸ್ಯತ್ವವನ್ನು ಸಂಸ್ಥೆಯ ಪದಾಧಿಕಾರಿಗಳ ಸಭೆಯನ್ನು ನಡೆಸಿ ರದ್ದುಪಡಿಸಲಾಗಿದೆ ಎಂದರು.ನೂತನ ಪದಾಧಿಕಾರಿಗಳು:ಸಂಜೀವಿನಿ ಲಿಂಗತ್ವ ಅಲ್ಪಸಂಖ್ಯಾತರ ಸೇವಾ ಸಂಸ್ಥೆಗೆ ನೂತನ ಜಿಲ್ಲಾಧ್ಯಕ್ಷೆಯಾಗಿ ತನುಶ್ರೀ ಧಾರವಾಡ, ಉಪಾಧ್ಯಕ್ಷೆ ಲಕ್ಷ್ಮಿ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಸಾಧಿಕ ಎ.ಜಿ., ಉಪ ಕಾರ್ಯದರ್ಶಿ ಅಪ್ಪು ಎಚ್.ಎಂ., ಖಜಾಂಚಿ ಅಂಕಿತಾ ಜಿ., ಸದಸ್ಯರಾಗಿ ಆನಂದ ಪಮ್ಮಾರ, ಮಾಲಾ ಬಾರ್ಕಿ, ಶಿವಾನಿ ಕೆ., ಬಸಯ್ಯ ಪಿ.ಎಚ್. ಅವರನ್ನು ನೇಮಕ ಮಾಡಲಾಗಿದೆ ಎಂದರು.ಲಕ್ಷ್ಮಿ ಎಸ್.ಡಿ., ಮಾಲಾ ಎಚ್.ಬಿ., ಅರುಣ ಡಿ., ಸೈಯದ್ ಎಸ್., ಚಂದ್ರು ಪಾಟೀಲ ಇದ್ದರು.ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ರಟ್ಟೀಹಳ್ಳಿ: ಪ್ರಿಯಕರನ ಜತೆಗೂಡಿ ಪತಿಯನ್ನು ಕೊಲೆ ಮಾಡಿ ತಾಲೂಕಿನ ಮದಗ ಮಾಸೂರ ಕೆರೆಗೆ ಎಸೆದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಶಫಿವುಲ್ಲಾ ಅಬ್ದುಲ್ ಮುಹಿಬ್(38) ಕೊಲೆಯಾದ ವ್ಯಕ್ತಿ. ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ಮುಬಾರಕ್ ಖಲಂದರಸಾಬ ಮುಲ್ಲಾ ಹಾಗೂ ಶಹೀನಾಬಾನು ಕೋಂ ಶಫಿವುಲ್ಲಾ ಬಂಧಿತ ಆರೋಪಿತರು.
ಹರಿಹರದ ಶಫಿವುಲ್ಲಾ ಅಬ್ದುಲ್‍ಮುಹಿಬ್ ಪತ್ನಿ ಶಹೀನಾಬಾನು ಹಾಗೂ ಮಕ್ಕಳೊಂದಿಗೆ ಕಳೆದ ಒಂದು ವರ್ಷದಿಂದ ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಲ್ಲಿ ವಾಸವಾಗಿದ್ದರು. ಈ ಸಮಯದಲ್ಲಿ ಶಹೀನಾಬಾನು ಹಾಗೂ ಮುಬಾರಕ್ ಜತೆಗಿನ ಅಕ್ರಮ ಸಂಬಂಧ ಪತಿಗೆ ಗೊತ್ತಾದ ಹಿನ್ನೆಲೆ ಆಗಾಗ್ಗೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಶಹೀನಾಬಾನು ಆಕೆಯ ಪ್ರಿಯಕರ ಮುಬಾರಕ್ ಜತೆಗೂಡಿ ಜು. 19ರರಂದು ಶಫಿವುಲ್ಲಾನನ್ನು ಕೊಲೆ ಮಾಡಿ ಶವವನ್ನು ತಾಲೂಕಿನ ಮದಗ ಮಾಸೂರ ಕೆರೆಯಲ್ಲಿ ಎಸೆದಿದ್ದರು.ಜು. 26ರಂದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಇದು ಅಸಹಜ ಸಾವು ಎಂದು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರ ತನಿಖೆಯ ಬಳಿಕ ಕೊಲೆಯ ಸಂಗತಿ ಬೆಳಕಿಗೆ ಬಂದಿದೆ. ನಂತರ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.