ಸಾರಾಂಶ
ಜಿಲ್ಲಾ ಕೇಂದ್ರವಾದರೂ ಹಾವೇರಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಊರಿಗೆ ನಾನು ಎಂಎಲ್‌ಎ ಆಗಿದೀನಲ್ಲ ಎಂದು ಬೇಸರವಾಗುತ್ತದೆ. ಅದಕ್ಕಾಗಿ ಇಲ್ಲಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ರಿಂಗ್ ರೋಡ್ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಅಥವಾ ಸೇಫ್ ಸಿಟಿ ಯೋಜನೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕ, ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಹಾವೇರಿ:ಜಿಲ್ಲಾ ಕೇಂದ್ರವಾದರೂ ಹಾವೇರಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಊರಿಗೆ ನಾನು ಎಂಎಲ್‌ಎ ಆಗಿದೀನಲ್ಲ ಎಂದು ಬೇಸರವಾಗುತ್ತದೆ. ಅದಕ್ಕಾಗಿ ಇಲ್ಲಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ರಿಂಗ್ ರೋಡ್ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಅಥವಾ ಸೇಫ್ ಸಿಟಿ ಯೋಜನೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕ, ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ಗಂಭೀರ ಸಮಸ್ಯೆಗಳ ಬಗ್ಗೆ ಸದಸ್ಯರು ಗಮನಕ್ಕೆ ತಂದಾಗ, ನೀವು ಹೇಳೋದು, ಜನ ಹೇಳುವ ಸಮಸ್ಯೆ ಕೇಳಿ ಒಮ್ಮೊಮ್ಮೆ ಈ ಊರಿಗೆ ನಾನು ಎಂಎಲ್‌ಎ ಆಗೇನಲ್ಲಪ್ಪಾ ಅನಿಸುತ್ತೆ. ಅದಕ್ಕಾಗಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದೇನೆ. ಯಾವುದಾದರೂ ಖಾಸಗಿ ಏಜೆನ್ಸಿ ಮೂಲಕ ಹಾವೇರಿಯ ಸಮಗ್ರ ಅಭಿವೃದ್ಧಿಗೆ ಎಷ್ಟು ಅನುದಾನ ಬೇಕಾಗಬಹುದು ಎಂಬುದರ ಅಂದಾಜು ಪಟ್ಟಿ ಸಿದ್ಧಪಡಿಸಬೇಕಿದೆ. ಜಿಲ್ಲಾ ಕೇಂದ್ರದ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳಿಸಲು ಪ್ರಯತ್ನಿಸಿದ್ದೇನೆ. ಇದು ಅನುಷ್ಠಾನಗೊಂಡರೆ ನಗರದ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.ಕೆಯುಐಡಿಎಫ್‌ಸಿ ವತಿಯಿಂದ ನಗರದ ಒಳಚರಂಡಿ ಯೋಜನೆ ಹಮ್ಮಿಕೊಂಡಿದ್ದು ಅದರ ಸಮಸ್ಯೆ ಗಂಭೀರವಾಗಿದೆ. ಕೆಲಸ ಮಾಡದೇ ಬಿಲ್ ತೆಗೆದಿದ್ದಾರೆ. ಈ ಕುರಿತು ಜಂಟೀ ತನಿಖಾ ವರದಿ ಬಂದ ನಂತರ ಸೂಕ್ತ ತೀರ್ಮಾನ ಸಾಧ್ಯ. ಒಟ್ಟಾರೆ ನನ್ನ ಈ ಅವಧಿಯಲ್ಲೇ ನಗರದ ೨೪-೭ ನೀರು ನೀಡುವುದು ಮತ್ತು ಸಮರ್ಪಕ ಒಳಚರಂಡಿ ಯೋಜನೆ ಪೂರ್ಣಗೊಳಿಸುತ್ತೇನೆ ಎಂದರು.ನಗರಸಭೆ ಸಮೀಪದ ಗೂಗಿಕಟ್ಟಿ ಪ್ರದೇಶದಲ್ಲಿ ಸುಮಾರು ₹ ೮ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್ ರಂಗಮಂದಿರ ನಿರ್ವಹಣೆ ಇಲ್ಲದೇ ೩ ವರ್ಷದಿಂದ ಖಾಲಿ ಬಿದ್ದಿದೆ. ಅಲ್ಲಿ ಯಾರೂ ಶೆಡ್ ಹಾಕಿಕೊಂಡಿದ್ದಾರೆ. ಕೂಡಲೇ ಈ ಶೇಡ್ ತೆರವುಗೊಳಿಸಿ, ರಂಗ ಮಂದಿರ ಬಾಡಿಗೆಗೆ ಕೊಡಿ ಎಂದು ಸದಸ್ಯ ಬಸವರಾಜ ಬೆಳವಡಿ ಒತ್ತಾಯಿಸಿದರು. ಆಗ ಶಾಸಕ ರುದ್ರಪ್ಪ ಲಮಾಣಿ ಪ್ರತಿಕ್ರಿಯಿಸಿ, ಈ ಕುರಿತು ಐದು ಬಾರಿ ಟೆಂಡರ್ ಕರೆದರೂ ಒಬ್ಬನೇ ವ್ಯಕ್ತಿ ಅರ್ಜಿ ಹಾಕಿದ್ದಾನೆ. ಅವನೂ ಐದು ವರ್ಷಕ್ಕೆ ಕರಾರು ಒಪ್ಪಂದ ಕೇಳುತ್ತಿದ್ದಾನೆ. ಈ ಕುರಿತು ಕುಳಿತು ಚರ್ಚಿಸಿ ತೀರ್ಮಾನ ಮಾಡೋಣ ಎಂದರು. ತೆರಿಗೆ ವಸೂಲಿಗೆ ಕಠಿಣ ಕ್ರಮ ಅಗತ್ಯ:ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ನಗರದಲ್ಲಿನ ನೀರಿನ ಕರ ೭ ಕೋಟಿ ರು. ಬಾಕಿ ಇದೆ. ಬೆಳಗ್ಗೆ ಟ್ಯಾಕ್ಸ್ ಕಲೆಕ್ಟ್ ಮಾಡುವ ಕೆಲಸ ಆಗುತ್ತಿತ್ತು. ಈಗ ಅದು ನಿಂತಿದೆ. ಶ್ರೀಮಂತರನ್ನು ಬಿಟ್ಟು ಬಡವರಿಂದ ಒತ್ತಡ ಹಾಕಿ ವಸೂಲಿ ಮಾಡೋದು ಸರಿಯಲ್ಲ, ಎಲ್ಲರಿಂದಲೂ ಟ್ಯಾಕ್ಸ್ ವಸೂಲಿ ಮಾಡುವ ಕೆಲಸ ಆಗಬೇಕು. ಓಟಿಎಸ್ ಮೂಲಕ ತೆರಿಗೆ ವಸೂಲಿ ಮಾಡಿದರೆ ನಗರಸಭೆಗೆ ಹೆಚ್ಚಿನ ಆದಾಯ ಬರುತ್ತೆ. ಶಿಕ್ಷಣ ಸಂಸ್ಥೆ, ಕಲ್ಯಾಣ ಮಂಟಪ ಸೇರಿದಂತೆ ಎಲ್ಲವುಗಳ ತೆರಿಗೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಒತ್ತುವರಿ ತೆರವುಗೊಳಿಸಿ: ವಿದ್ಯಾನಗರದಲ್ಲಿರುವ ರಸ್ತೆ ಹಾಗೂ ಪತ್ರಿಕಾ ಭವನದ ಎದುರಿನ ಜಾಗ ಒತ್ತುವರಿ ಆಗಿದೆ. ನಗರಸಭೆ ಆಸ್ತಿಯಾಗಿದ್ದರೂ ಸುತ್ತಲೂ ಕಂಪೌಂಡ್ ಅಳವಡಿಸಲಾಗಿದೆ. ಅದನ್ನು ತೆರವುಗೊಳಿಸಿ ಪತ್ರಕರ್ತರ ಸಂಘಕ್ಕೆ ನೀಡಿದರೆ ಅಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲ ಆಗಲಿದೆ ಎಂದು ಬಸವರಾಜ ಬೆಳವಡಿ, ಸದಸ್ಯ ಗಣೇಶ ಬಿಷ್ಠಣ್ಣನವರ ವಿಷಯ ಪ್ರಸ್ತಾಪಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.ಸದಸ್ಯೆ ಚೆನ್ನಮ್ಮ ಬ್ಯಾಡಗಿ ಮಾತನಾಡಿ, ಮಳೆಯಾದರೆ ಶಿವಾಜಿ ನಗರದ ಅನೇಕ ಮನೆಗಳಿಗೆ ನೀರು ನುಗ್ಗುತ್ತದೆ. ಪ್ರತಿ ಸಲವೂ ಇದು ಪುನರಾವರ್ತನೆಯಾದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಶಾಸಕ ರುದ್ರಪ್ಪ ಲಮಾಣಿ, ಸದಸ್ಯರಾದ ಸಂಜೀವ ನೀರಲಗಿ, ಗಣೇಶ ಬಿಷ್ಟಣ್ಣನವರ ಇತರರು ಸಮಸ್ಯೆ ಬಗೆಹರಿಸಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಮಾಡಬೇಕಿದೆ ಎಂದು ಹೇಳಿದರು.
ಈ ವೇಳೆ ನಗರಸಭೆ ಆಡಳಿತಾಧಿಕಾರಿ ಸಿ.ಚನ್ನಪ್ಪ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಇದ್ದರು.