ಕೊಂಕಣ ರೈಲ್ವೆ ಸೌಲಭ್ಯ ಸುಧಾರಣೆಗೆ ಪ್ರಯತ್ನ: ಸಂಸದ ಕಾಗೇರಿ

| Published : Mar 05 2025, 12:31 AM IST

ಕೊಂಕಣ ರೈಲ್ವೆ ಸೌಲಭ್ಯ ಸುಧಾರಣೆಗೆ ಪ್ರಯತ್ನ: ಸಂಸದ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಂಕಣ ರೈಲ್ವೆಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯ ಅರ್ಹರಿಗೆ ಉದ್ಯೋಗವಕಾಶ ಕೂಡ ಕಲ್ಪಿಸಲಾಗುತ್ತಿದೆ

ಕಾರವಾರ: ಗೋವಾದಲ್ಲಿ ಸೋಮವಾರ ನಡೆದ ಕೊಂಕಣ ರೈಲ್ವೆ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಹೊಸ ನಿಲ್ದಾಣ, ರೈಲು, ಬೋಗಿಗಳ ಸೇರ್ಪಡೆ,ನಿಲುಗಡೆ ಹಾಗೂ ಮೂಲಭೂತ ಸೌಲಭ್ಯಗಳ ಸುಧಾರಣೆಗೆ ಒತ್ತಾಯಿಸಿದ್ದು, ಆದ್ಯತೆ ಮೇರೆಗೆ ಈ ವ್ಯವಸ್ಥೆಗಳ ಸುಧಾರಣೆ ನಡೆಯಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಾರವಾರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾಹಿತಿ ನೀಡಿದರು.

ಕೊಂಕಣ ರೈಲ್ವೆ ಯೋಜನೆಗೆ ಭೂಮಿ ಕಳೆದುಕೊಂಡು ಪರಿಹಾರ ಸಿಗದ ಒಂದು ಸಾವಿರ ಪ್ರಕರಣ ಜಿಲ್ಲೆಯಲ್ಲಿವೆ. ಅವರಿಗೆ ಪರಿಹಾರ ಒದಗಿಸಲು ರೈಲ್ವೆ ಅಧಿಕಾರಿಗಳು, ಜಿಲ್ಲಾಧಿಕಾರಿ, ಜಿಪಂ ಸಿಇಓ ಹಾಗೂ ಕರಾವಳಿಯ ಮೂವರು ಉಪ ವಿಭಾಗಾಧಿಕಾರಿಗಳ ಸಭೆ ನಡೆಸಲಾಗಿದೆ. ಬಾಕಿ ಇರುವ ಪ್ರಕರಣಗಳು ಜಿಲ್ಲಾಡಳಿತದ ಮೂಲಕ ಇತ್ಯರ್ಥವಾಗಬೇಕಿದೆ.ಸೀಬರ್ಡ್‌ ನಿರಾಶ್ರಿತರ ಪ್ರಕರಣ ಇತ್ಯರ್ಥಗೊಳಿಸಲಾಗಿದ್ದು, ಪರಿಹಾರ ವಿತರಣೆ ಹಂತದಲ್ಲಿದೆ ಎಂದು ವಿವರಿಸಿದರು.

ಕೊಂಕಣ ರೈಲ್ವೆಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಜಿಲ್ಲೆಯ ಅರ್ಹರಿಗೆ ಉದ್ಯೋಗವಕಾಶ ಕೂಡ ಕಲ್ಪಿಸಲಾಗುತ್ತಿದೆ.ಕೊಂಕಣ ರೈಲ್ವೆ ನಿರಾಶ್ರಿತರ ಪರಿಹಾರಕ್ಕೆ ಅಡ್ಡಿಯಾಗಿರುವ ಹಲವು ತಾಂತ್ರಿಕ ಸಮಸ್ಯೆ ಪರಿಹರಿಸಿ 28 ಎ ನಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕುಮಟಾ ಹಾಗೂ ಗೋಕರ್ಣದ ಪ್ಲಾಟ್ ಫಾರ್ಮ್ ಗಳ ಎತ್ತರ ಹೆಚ್ಚಿಸಬೇಕಾದ ತುರ್ತ ಅಗತ್ಯವಿದೆ. ಮಳೆಗಾಲದಲ್ಲಿ ಹಾಗೂ ವೃದ್ಧರಿಗೆ ಹತ್ತುವುದು ಇಳಿಯುವುದು ತೊಂದರೆಯಾಗುತ್ತಿದೆ. ಕೊಂಕಣ ರೈಲ್ವೆ ಈ ಕಾಮಗಾರಿಗೆ ಮಂಜೂರಾತಿ ನೀಡಿದ್ದು ಕೆಲ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಗೋವಾದಲ್ಲಿ ನಡೆದ ಸಭೆಯಲ್ಲಿ ಗೋವಾ,ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಆದರೆ ಕೋಂಕಣ ರೈಲ್ವೆ ಮೂಲಭೂತ ಸೌಕರ್ಯ, ಹೊಸ ಹಳಿ ಸಂಪರ್ಕ ಸುಧಾರಣೆಗೆ ಆ ರಾಜ್ಯಗಳು ಗರಿಷ್ಠ ಸಹಾಯ ಸಹಕಾರ ನೀಡಿದೆ. ಆದರೆ ರಾಜ್ಯ ಸರ್ಕಾರ ಈವರೆಗೆ ಕೊಂಕಣ ರೈಲ್ವೆಗೆ ಯಾವುದೇ ಸಹಕಾರ ನೀಡಿಲ್ಲ. ಈ ಬಗ್ಗೆ ಕೊಂಕಣ ರೈಲ್ವೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರದ ಜತೆ ಮಾತುಕತೆ ನಡೆಸುವಂತೆ ತಿಳಿಸಲಾಗಿದೆ. ಅಲ್ಲದೇ ರಾಜ್ಯದ ಕರಾವಳಿ ಜಿಲ್ಲೆಗಳ ರೈಲ್ವೆ ನಿಲ್ದಾಣಗಳ ಸುಧಾರಣೆ ಸಹಕಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಸುತ್ತೇನೆ ಎಂದರು.

ಹುಬ್ಬಳ್ಳಿ ಅಂಕೋಲಾ ರೈಲ್ವೇ ಯೋಜನೆಗೆ ಇರುವ ಅಡೆತಡೆ ನಿವಾರಣೆ ಮುಕ್ತಾಯದ ಹಂತದಲ್ಲಿದೆ. ಕಾಳಿ ಮತ್ತು ಶರಾವತಿ ನದಿ ಹೊಸ ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಅಂಕೋಲಾದಲ್ಲಿ ವಿಠ್ಠಲ ಘಾಟ್ ಬಳಿ ಅಂಡರ್‌ಪಾಸ್ ಆಗಬೇಕು ಎನ್ನುವ ಬಗ್ಗೆ ಸ್ಥಳೀಯರ ಆಗ್ರಹ ಇದೆ.ಇದಕ್ಕೆ ಸರ್ವಿಸ್ ರಸ್ತೆ ಬೇಕಿದ್ದು, ಭೂಸ್ವಾಧೀನ ಸಹ ಆಗಬೇಕಾಗಿದೆ ಇದರಿಂದ ವಿಳಂಬವಾಗುತ್ತಿದೆ ಎಂದರು.