ಕಾರಟಗಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಪ್ರಯತ್ನ: ಡಾ. ತೇಜೇಶ್ವರ ನಾಯಕ ಭರವಸೆ

| Published : May 17 2024, 12:33 AM IST

ಕಾರಟಗಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿಸಲು ಪ್ರಯತ್ನ: ಡಾ. ತೇಜೇಶ್ವರ ನಾಯಕ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಐತಿಹಾಸಿಕ ದೇವಸ್ಥಾನ, ಪುಷ್ಕರಣಿಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಸಲು ಇಲಾಖೆಯಿಂದ ಪ್ರಯತ್ನಿಸಲಾಗುವುದು

ರಾಜ್ಯ ಪುರಾತತ್ವ, ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಹಂಪಿಯ ಉಪನಿರ್ದೇಶಕ

ಕನ್ನಡಪ್ರಭ ವಾರ್ತೆ ಕಾರಟಗಿ

ಪಟ್ಟಣದ ಐತಿಹಾಸಿಕ ದೇವಸ್ಥಾನ, ಪುಷ್ಕರಣಿಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿಸಲು ಇಲಾಖೆಯಿಂದ ಪ್ರಯತ್ನಿಸಲಾಗುವುದು ಎಂದು ರಾಜ್ಯ ಪುರಾತತ್ವ, ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆ ಹಂಪಿಯ ಉಪನಿರ್ದೇಶಕ ಡಾ. ಆರ್. ತೇಜೇಶ್ವರ ನಾಯಕ ಭರವಸೆ ನೀಡಿದರು.

ಇಲ್ಲಿನ ಐತಿಹಾಸಿಕ ಸುಂಕಲ ವೀರಪ್ಪನ ಬಾವಿ ಸ್ಥಳಕ್ಕೆ (ಪುಷ್ಕರಣಿ) ಬುಧವಾರ ಸಂಜೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಮಾತನಾಡಿದರು.

ಈಗ ಪುಷ್ಕರಣಿಯು ಮೂಲ ಪರಂಪರೆಯೊಂದಿಗೆ ಮನೋಜ್ಞವಾಗಿಯು, ಸುಂದರವಾಗಿಯೂ ಕಾಣುತ್ತಿದೆ. ವಿಜಯನಗರ ಆಳ್ವಿಕೆಯ ಸಾಮಂತರು ನಿರ್ಮಿಸಿದ ಪುಷ್ಕರಣಿಯು ನಿರ್ಲಕ್ಷ್ಯಕ್ಕೆ ಈಡಾಗಿ ಮುಚ್ಚಿಕೊಂಡಿತ್ತು. ಅದನ್ನು ಇಲ್ಲಿನ ಯುವ ಸಮುದಾಯ ಸ್ವಚ್ಛಗೊಳಿಸಿ ಪುನುರುಜ್ಜೀವನಗೊಳಿಸಿರುವುದು ಸಂತಸದ ವಿಚಾರ. ಇನ್ನೂ ಹೆಚ್ಚಿನ ಜೀರ್ಣೋದ್ಧಾರ, ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಈ ಪುಷ್ಕರಣಿಯನ್ನು ಆರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳುತ್ತದೆ. ಜೊತೆಗೆ ಮುಂದಿನ ದಿನಗಳಲ್ಲಿ ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಇಲಾಖೆಯ ಅಭಿಯಂತರರನ್ನು ಕಳುಹಿಸಿ ಅಂದಾಜು ವೆಚ್ಚ ತಯಾರಿಸಿ ಪುಷ್ಕರಣಿಯನ್ನು ಅಭಿವೃದ್ಧಿಪಡಿಸಲಾಗುವುದು ಅದಕ್ಕಾಗಿ ಯೋಜನೆ ರೂಪಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಕಾರಟಗಿ ಸಾಂಸ್ಕೃತಿಕ ಕೇಂದ್ರವಾಗಿತ್ತು. ಮಹದೇಶ್ವರ ದೇವಾಲಯ ಸೇರಿ ಇತರೆ ಪ್ರಾಚೀನ ಶಿಲ್ಪಗಳು ಇಲ್ಲಿವೆ. ಇನ್ನು ವೆಂಕಟೇಶ್ವರ ದೇವಾಲಯ ಹಾಗೂ ಮಹದೇಶ್ವರ ದೇವಾಲಯಗಳ ಮಧ್ಯ ವಿಶಾಲವಾದ ಪುಷ್ಕರಣಿಯನ್ನು ವಿಜಯನಗರ ಸಾಮ್ರಾಜ್ಯದ ಕೊನೆಯ ಕಾಲ ಘಟ್ಟದಲ್ಲಿ ನಿರ್ಮಿಸಲಾಗಿದೆ.

ಈ ಪುಷ್ಕರಣಿಯ ವಾಸ್ತುಲಕ್ಷಣ ಗಮನಿಸಿದರೆ ಇದು ೧೬-೧೭ನೇ ಶತಮಾನದಲ್ಲಿ ರಚನೆಯಾಗಿದೆ ಎಂದು ಕಂಡು ಬರುತ್ತದೆ. ಸುತ್ತಮುತ್ತಲಿನ ನಿವಾಸಿಗಳು, ಅಂಗಡಿಕಾರರು ಕಸ, ಕಡ್ಡಿ ತ್ಯಾಜ್ಯ ಹಾಕಿದ ಕಾರಣಕ್ಕೆ ಬಾವಿ ಮುಚ್ಚಿಹೋಗಿತ್ತು. ಅಂಥದ್ದನ್ನು ಇಲ್ಲಿನ ಯುವಕರ ಗುಂಪು ಎರಡು ತಿಂಗಳುಗಳ ಕಾಲ ಪರಿಶ್ರಮಿಸಿ ಸ್ವಚ್ಚತಾ ಕಾರ್ಯದ ಮೂಲಕ ಮತ್ತೆ ಹಳೆಯ ವೈಭವವನ್ನು ಮರಳಿ ಪಡೆಯುವಂತೆ ಮಾಡಿರುವುದು ಅದ್ಭುತ ಕಾರ್ಯ ಎಂದರು

ವೀಕ್ಷಣೆ:ಡಾ. ಶೇಜೇಶ್ವರ ನಾಯಕ ಮತ್ತು ಅಧಿಕಾರಿಗಳ ತಂಡ ಮೊದಲಿಗೆ ಮಹದೇಶ್ವರ ಮತ್ತು ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಗಳ ಮಧ್ಯದ ಇರುವ ಸುಂಕಲ ವೀರಪ್ಪನ ಪುಷ್ಕರಣಿಯನ್ನು ವೀಕ್ಷಿಸಿದರು. ಈ ವೇಳೆ ಅಲ್ಲಿರುವ ಕೆತ್ತನೆಯ ಚಿತ್ರ, ಬಾವಿಯ ಒಂದು ಭಾಗದಲ್ಲಿರುವ ಕಲ್ಲಿನ ಮಂಟಪ ಶಿಲ್ಪ ಸೌಂದರ್ಯವನ್ನು ವೀಕ್ಷಿಸಿದರು. ಜೊತೆಗೆ ಪುಷ್ಕರಣಿಯಲ್ಲಿನ ಮೆಟ್ಟಿಲುಗಳ ಮೇಲಿನ ಕೆತ್ತನೆಯ ಚಿತ್ರ ಸೆರೆ ಹಿಡಿದರು. ತಂಡದೊಂದಿಗೆ ಇದ್ದ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ಸ್ವಚ್ಛತಾ ತಂಡದೊಂದಿಗೆ, ಪುಷ್ಕರಣಿ ಮಾಹಿತಿ ಪಡೆದರು.

ನಂತರ ಕಲ್ಯಾಣಿ ಚಾಲುಕ್ಯರ ಕಾಲದ ಐತಿಹಾಸಿಕ ಮಹದೇಶ್ವರ ದೇವಸ್ಥಾನ ವೀಕ್ಷಿಸಿದ ಅಧಿಕಾರಿಗಳು ಡಾ. ಶರಣಬಸಪ್ಪ ಕೋಲ್ಕಾರ್ ಅವರೊಂದಿಗೆ ದೇವಸ್ಥಾನದ ಇತಿಹಾಸ, ನಿರ್ಮಾಣ ಮತ್ತು ಅದರ ಐತಿಹ್ಯದ ಕುರಿತು ಚರ್ಚೆ ನಡೆಸಿದರು. ನಂತರ ಹಳೇ ಬಜಾರ್ ರಸ್ತೆಯಲ್ಲಿನ ಈಶ್ವರ ದೇವಾಲಯಕ್ಕೆ ತೆರಳಿ ಅಲ್ಲಿನ ವಿಶಿಷ್ಠ ಸಹಸ್ರ ಲಿಂಗು ಪಾಣಿಪೀಠವನ್ನು ವೀಕ್ಷಿಸಿ ಅದರ ಐತಿಹಾಸಿಕ ಹಿನ್ನೆಲೆ ತಿಳಿದುಕೊಂಡರು. ಈ ವೇಳೆ ಮಹಾದೇಶ್ವರ ಮತ್ತು ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಕ್ಕೂ ತೆರಳಿ ಅಲ್ಲಿನ ದೇವರ ವಿಗ್ರಹಗಳ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಪುರಾತತ್ವ ಸಹಾಯಕ ಡಾ. ಮಂಜ ನಾಯ್ಕ್, ಪುಷ್ಕರಣಿ ಸ್ವಚ್ಛತಾ ಸಮಿತಿಯ ಪ್ರಮುಖರಾದ ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ, ಮರುಳಸಿದ್ದಯ್ಯಸ್ವಾಮಿ ಹಿರೇಮಠ, ನಾಗರಾಜ್ ಕೊಟಗಿ, ಬಸವರಾಜ್ ಚಿನಿವಾಲ್, ವೆಂಕಟೇಶ್ ಆರೇರ್, ವೆಂಕಟೇಶ್ವರರಾವ್ ಇತರರಿದ್ದರು.