ನರಗುಂದ: ಪಟ್ಟಣದ ಐತಿಹಾಸಿಕ ಭಾಸ್ಕರರಾವ್ ಭಾವೆಯವರ ಅರಮನೆ ಹಾಗೂ ಅವಶೇಷಗಳನ್ನು ಸಂರಕ್ಷಿಸಲಾಗುವುದು ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.

ಪಟ್ಟಣದ ಐತಿಹಾಸಿಕ ಭಾಸ್ಕರರಾವ್ ಭಾವೆಯವರ ಅರಮನೆಗೆ ಭೇಟಿ ನೀಡಿ ಮಾತನಾಡಿ, ಅರಮನೆಯಲ್ಲಿದ್ದ ಪುರಸಭೆ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ ಅರಮನೆ ಖಾಲಿ ಇದೆ. ಅರಮನೆ ಹಾಗೆ ಬಿಟ್ಟರೆ ಹಾಳಾಗಿ ಅನ್ಯಚಟುವಟಿಕೆಗಳ ತಾಣವಾಗುತ್ತದೆ. ಅದನ್ನು ತಪ್ಪಿಸಲು ನರಗುಂದದ ಕುರುಹು ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ಹಿಂದೆ ನಿರ್ಣಯ ಮಾಡಿದಂತೆ ಅರಮನೆ ಹಾಗೂ ಬಾಬಾಸಾಹೇಬರ ಅವಶೇಷಗಳನ್ನು ಪುರಾತತ್ವ ಇಲಾಖೆಗೆ ವಹಿಸಲಾಗುತ್ತಿದೆ ಎಂದರು.

ಇದಕ್ಕಾಗಿ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲರಿಗೆ ಮನವಿ ಮಾಡಲಾಗಿತ್ತು. ಅವರ ಸೂಚನೆಯಂತೆ ಪುರಾತತ್ವ ಇಲಾಖೆ ಅಧಿಕಾರಿಗಳು ವೀಕ್ಷಣೆಗೆ ಬಂದಿದ್ದಾರೆ. ಅವರು ಸಂಪೂರ್ಣ ವೀಕ್ಷಿಸಿ, ಮಾಹಿತಿ ಪಡೆದ ಸಂಪೂರ್ಣ ವರದಿಯನ್ನು ಸಂಬಂಧಿಸಿದ ಇಲಾಖೆ ಹಾಗೂ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ನಂತರ ಇದನ್ನು ಪುರಾತತ್ವ ಇಲಾಖೆ ಸುಪರ್ದಿಗೆ ವಹಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ ನಿರ್ದೇಶಕಿ ಸ್ಮಿತಾ ರಡ್ಡಿ ಮಾತನಾಡಿ, ಸಚಿವ ಎಚ್.ಕೆ. ಪಾಟೀಲರ ಸೂಚನೆಯಂತೆ ಇಲ್ಲಿಗೆ ಬಂದಿದ್ದೇವೆ. ಅರಮನೆಯನ್ನು ವೀಕ್ಷಿಸಿದಾಗ. ಬಹು ಅಮೂಲ್ಯವಾದ ಸುಸಜ್ಜಿತ ಅರಮನೆ ಕಟ್ಟಡವಿದೆ. ಅರಮನೆ ಮೇಲ್ಭಾಗದಲ್ಲಿ ವಿಶಿಷ್ಟ, ಬೆಲೆಬಾಳುವ ತೈಲವರ್ಣ ಚಿತ್ರಕಲೆಗಳಿವೆ. ಇದರಲ್ಲಿ ರಾಮಾಯಣ, ಭಾಗವತ ಪುರಾಣ, ವಿಷ್ಣು ಪುರಾಣ ಸಾರುವ ಧಾರ್ಮಿಕ, ಸಾಮಾಜಿಕ ಸಂದೇಶ ನೀಡುವ ಅಪರೂಪದ ಚಿತ್ರಕಲೆ ಇದೆ. ಸಮಗ್ರ ವರದಿಯನ್ನು ಇಲಾಖೆಯ ಆಯುಕ್ತರಿಗೆ ಸಲ್ಲಿಸಲಾಗುತ್ತದೆ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ನಿವೃತ್ತ ಉಪನ್ಯಾಸಕ ಎಂ.ಎಸ್. ಯಾವಗಲ್ ಮಾತನಾಡಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಪುರಾತತ್ವ ಇಲಾಖೆಯ ಎಂಜಿನಿಯರ್ ಸುವರ್ಣಾ, ಬಸು ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ರಾಚನಗೌಡ ಪಾಟೀಲ, ಮಾರುತಿ ಅರ್ಭಣದ, ಸಿದ್ದು ಹೂಗಾರ ಸೇರಿದಂತೆ ಮುಂತಾದವರು ಇದ್ದರು.