ಪಡಿತರ ವಿತರಕರ ಸಮಸ್ಯೆ ಪರಿಹರಿಸಲು ಪ್ರಯತ್ನ: ಶಾಸಕ ಸೇಠ್‌

| Published : Jan 14 2024, 01:30 AM IST

ಪಡಿತರ ವಿತರಕರ ಸಮಸ್ಯೆ ಪರಿಹರಿಸಲು ಪ್ರಯತ್ನ: ಶಾಸಕ ಸೇಠ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು, ಜಿಲ್ಲಾ ಕೇಂದ್ರ ಬೆಳಗಾವಿ ಹಾಗೂ ಪದಗ್ರಹಣ ಮತ್ತು ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಹೇಳಿಕೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿಯಲ್ಲಿ ಅತ್ಯುತ್ತಮ ಕೆಲಸ ಮಾಡಿ ಜನರ ಮೆಚ್ಚುಗೆ ಪಡೆದಿದೆ ಎಂದು ಶಾಸಕ ಆಸೀಫ್ ಸೇಠ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ (ರಿ) ಬೆಂಗಳೂರು, ಜಿಲ್ಲಾ ಕೇಂದ್ರ ಬೆಳಗಾವಿ ಹಾಗೂ ಪದಗ್ರಹಣ ಮತ್ತು ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪಡಿತರ ವಿತರಕರಿಗೆ ಬಿಪಿಎಲ್ ಸೇರಿದಂತೆ ಎಲ್ಲ ಕಾರ್ಡ್‌ಗಳ ಗ್ರಾಹಕರಿಗೆ ನೀಡುವ ಧವಸ ದಾನ್ಯಗಳ ಹಂಚಿಕೆ ಮಾಡುವುದರಲ್ಲಿ ತಮಗೆ ಬೆಂಬಲ ಬೆಲೆ ಸರ್ಕಾರದಿಂದ ಮಾತುಕತೆ ನಡೆಸಿ ಅದನ್ನು ಹೆಚ್ಚಿಗೆ ಮಾಡಿಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದು ಭರವಸೆ ನೀಡಿದರು.

ಸರ್ಕಾರದ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಸಹಕಾರಿ ಪಡಿತರ ವಿತರಕರ ಸಂಘದ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ನಿಮ್ಮ ಸಮಸ್ಯೆ ಏನೇ ಇದ್ದರೂ ನಾನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಜತೆಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಬಗೆ ಹರಿಸಿಕೊಡುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಆಹಾರ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ್ ಕಂಕಣವಾಡಿ ಮಾತನಾಡಿ, ಸಹಕಾರಿ ಪಡಿತರ ವಿತರಕರಿಗೆ ಸರ್ಕಾರದಿಂದ ಬರಬೇಕಾದ ಕಮಿಷನ್ ಹಣ ತಡವಾಗಿ ಬರುತ್ತಿದೆ. ಸಹಕಾರಿ ಪಡಿತರ ವಿತರಕರಿಗೆ ಸರ್ಕಾರ ಹೊಸ ಹೊಸ ತಂತ್ರಾಂಶಗಳಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ಫಲಾನುಭವಿಗಳಿಗೆ ಎಷ್ಟು ಧಾನ್ಯಗಳನ್ನು ವಿತರಿಸುತ್ತಾರೆ ಎನ್ನುವುದು ದಾಖಲೆ ಮಾಡುವುದು ಕಷ್ಟವಾಗುತ್ತಿದೆ. ಇದನ್ನು ಸರಳಿಕರಣ ಮಾಡಿಕೊಡಬೇಕಿದೆ ಎಂದರು.

ಇದೇ ವೇಳೆ ನೂತನ ಪದಾಧಿಕಾರಿಗಳಾಗಿ ಮಾಜಿ ತಾಪಂ ಸದಸ್ಯ ಸುರೇಶ ರಾಜುಕರ, ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್ ಬಾಗಡೆ, ನಗರ ಅಧ್ಯಕ್ಷ ಬಾಳು ಪಾಟೀಲ, ಬಸವರಾಜ ದೊಡಮನಿ, ಉಮಾ ಸೋನವಾಡ್ಕರ್, ಬಾಬು ಶಿರಹಟ್ಟಿ, ಪ್ರಭು ಪಾಟೀಲ, ಸರೋಜಾ ದೊಡಮನಿ, ವೈಶಾಲಿ ಖಂಡಾರೆ, ಸುರೇಶ ರಾಜುಕರ, ಅರುಣ ಪಾಟೀಲ, ನಮೀವುಲ್ಲಾ ಅತ್ತಾರ, ಮಾರುತಿರಾವ್ ಅಂಬೋಳ್ಕರ್, ಉದಯ ಬಾಳೇಕುಂದ್ರಿ, ಪ್ರಮೋದ ಮುನವಳ್ಳಿ ಪದಗ್ರಹಣ ಮಾಡಿದರು.

ಈ ಕಾರ್ಯಕ್ರಮದಲ್ಲಿ ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಉಪಆಯುಕ್ತ ಉದಯಕುಮಾರ ತಳವಾರ, ಕರ್ನಾಟಕ ರಾಜ್ಯ ಸಹಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷ ರಾಜಶೇಖರ ತಳವಾರ, ಸಂಘದ ಜಿಲ್ಲಾಧ್ಯಕ್ಷ ಶಾಂತಿನಾಥ ಬುಡವಿ, ಚಂಬಣ್ಣ ಹೊಸಮನಿ ಉಪಸ್ಥಿತರಿದ್ದರು. ಪುನಿತ ಬುಡವಿ ನಿರೂಪಿಸಿ, ವಂದಿಸಿದರು.