ಪ್ರತಿ ಕಾಲೇಜುಗಳಲ್ಲೂ ಗಣಕ ವಿಜ್ಞಾನ ಪ್ರಯೋಗಾಲಯ ಪ್ರಾರಂಭಕ್ಕೆ ಯತ್ನ: ಶಿಕ್ಷಣ ಸಚಿವ ಮಧು ಬಂಗಾರಪ್ಪ

| Published : Nov 28 2024, 12:33 AM IST

ಪ್ರತಿ ಕಾಲೇಜುಗಳಲ್ಲೂ ಗಣಕ ವಿಜ್ಞಾನ ಪ್ರಯೋಗಾಲಯ ಪ್ರಾರಂಭಕ್ಕೆ ಯತ್ನ: ಶಿಕ್ಷಣ ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರು. ವ್ಯಯಿಸಬೇಕಾಗಿದ್ದು, ಇದರಿಂದ ಬಡವರಿಗೆ ತುಂಬಾ ಹೊರೆಯಾಗುತ್ತಿದೆ.

ಸಿದ್ದಾಪುರ: ಇಂದಿನ ತಂತ್ರಜ್ಞಾನ ಯುಗದಲ್ಲಿ ಗಣಕ ವಿಜ್ಞಾನಕ್ಕೆ ಭಾರಿ ಬೇಡಿಕೆ ಬರುತ್ತಿದ್ದು, ಈ ಪ್ರಯೋಗಾಲಯಗಳನ್ನು ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಆರಂಭಿಸಲು ಪ್ರಯತ್ನಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಗಣಕವಿಜ್ಞಾನ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ಸಿಇಟಿ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಉಚಿತ ಆನ್‌ಲೈನ್ ಕೋಚಿಂಗ್ ಪ್ರಾರಂಭಿಸಲಾಗಿದೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರು. ವ್ಯಯಿಸಬೇಕಾಗಿದ್ದು, ಇದರಿಂದ ಬಡವರಿಗೆ ತುಂಬಾ ಹೊರೆಯಾಗುತ್ತಿದೆ. ರಾಜ್ಯದ ಎಲ್ಲ ಮಕ್ಕಳಿಗೆ ಅನುಕೂಲವಾಗಲೆಂದು ಸರ್ಕಾರದ ವತಿಯಿಂದ ಉಚಿತ ಆನ್‌ಲೈನ್ ಕೋಚಿಂಗ್ ಪ್ರಾರಂಭಿಸಲಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ಕೋಚಿಂಗ್ ಇರಲಿದ್ದು, ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದರು. ಸರ್ಕಾರಿ ಪಿಯು ಕಾಲೇಜುಗಳಿಗೆ ೮೦೦ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳಲು ತಯಾರಿ ನಡೆದಿದ್ದು, ಫೆಬ್ರವರಿಯೊಳಗೆ ನೋಟಿಫಿಕೇಶನ್ ಹೊರಡಿಸಲಾಗುವುದು. ಸರ್ಕಾರಿ ಶಿಕ್ಷಣದ ಬಗ್ಗೆ ಜನರಿಗೆ ವಿಶ್ವಾಸವಿದೆ. ಆದರೆ ವ್ಯವಸ್ಥಿತವಾಗಿ ಸೌಲಭ್ಯ ಕಲ್ಪಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿದ್ದು ವಿದ್ಯಾರ್ಥಿಗಳು ಪಾಲಕರ ಕಷ್ಟಕ್ಕೆ ಬೆಲೆ ಕೊಟ್ಟು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕು. ಹಾಳದಕಟ್ಟಾ ಕಾಲೇಜಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಹಂತ- ಹಂತವಾಗಿ ಒದಗಿಸಲಾಗುವುದು ಎಂದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗಣಕಯಂತ್ರಗಳಿಗೆ ತುಂಬಾ ಬೇಡಿಕೆಯಿದ್ದು, ಸರ್ಕಾರ ಇದಕ್ಕೆ ಉತ್ತೇಜನ ನೀಡಬೇಕು. ಮಧು ಬಂಗಾರಪ್ಪ ಸಚಿವರಾದಾಗ ಶಿಕ್ಷಕರ ಕೊರತೆಯಿತ್ತು. ನ್ಯಾಯಾಲಯದ ಅಡೆತಡೆ ನಿವಾರಿಸಿ ೧೩ ಸಾವಿರಕ್ಕೂ ಅಧಿಕ ಶಿಕ್ಷಕರ ನೇಮಕ ಮಾಡಿದ್ದು, ಅವರನ್ನು ಅಭಿನಂದಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜಪ್ಪ ಕೆ.ಎಚ್., ತಾಲೂಕು ದಂಡಾಧಿಕಾರಿ ಎಂ.ಆರ್. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಕಾಲೇಜಿನ ಪ್ರಾಚಾರ್ಯ ಭಾಸ್ಕರ ಹೆಗಡೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುನಾವರ್ ಗುರಕಾರ್, ಎಸ್.ಕೆ. ನಾಯ್ಕ ಉಪಸ್ಥಿತರಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುರೇಂದ್ರ ದಪೇಧಾರ್ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ನಾಯ್ಕ ನಿರೂಪಿಸಿದರು.