ಈಶ್ವರಮಂಗಲ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಂಟು ಜೋಡಿ ಅವಳಿ ಮಕ್ಕಳ ಆಕರ್ಷಣೆ

| Published : Jul 31 2025, 01:27 AM IST / Updated: Jul 31 2025, 01:29 AM IST

ಈಶ್ವರಮಂಗಲ ಖಾಸಗಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಂಟು ಜೋಡಿ ಅವಳಿ ಮಕ್ಕಳ ಆಕರ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟಿ ಚೆನ್ನಯರ ಹುಟ್ಟೂರಿನ ಸಮೀಪದಲ್ಲಿನ ಶಾಲೆಯೊಂದರಲ್ಲಿ ೮ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಎಂಬಲ್ಲಿರುವ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಷ್ಟ ಅವಳಿಗಳು ಗಮನ ಸೆಳೆಯುತ್ತಾರೆ.

ಪುತ್ತೂರು: ಹೇಳಿ ಕೇಳಿ ಪುತ್ತೂರು ಅವಳಿ ವೀರರಾದ ಕೋಟಿ ಚೆನ್ನಯರ ಹುಟ್ಟೂರು, ಬೆಳೆದೂರು ಎಂಬ ಐತಿಹಾಸಿಕ ಖ್ಯಾತಿ ಪಡೆದಿರುವ ಪ್ರದೇಶ. ಕೋಟಿ ಚೆನ್ನಯರ ಹುಟ್ಟೂರಿನ ಸಮೀಪದಲ್ಲಿನ ಶಾಲೆಯೊಂದರಲ್ಲಿ ೮ ಅವಳಿ ಮಕ್ಕಳು ಕಲಿಯುತ್ತಿದ್ದಾರೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಎಂಬಲ್ಲಿರುವ ಶ್ರೀ ಗಜಾನನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಷ್ಟ ಅವಳಿಗಳು ಗಮನ ಸೆಳೆಯುತ್ತಾರೆ.

ಕೆಲ ಶಾಲೆಗಳಲ್ಲಿ ಒಂದೆರಡು ಅವಳಿ ಮಕ್ಕಳಿರುವುದು ಸರ್ವೇ ಸಮಾನ್ಯ. ಆದರೆ ಈ ಶಾಲೆಯಲ್ಲಿ ೮ ಜೊತೆ ಅವಳಿ ಮಕ್ಕಳಿದ್ದಾರೆ. ಜೊತೆಗೆ ಈ ಶಾಲೆ ಇರುವ ಪ್ರದೇಶಕ್ಕೆ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯರ ನಂಟಿದೆ. ಕೋಟಿ-ಚೆನ್ನಯ ಅವರ ಹುಟ್ಟೂರಿನ ನೆಲೆಗಳು, ಅವರ ಇರುವಿಕೆಯ ಕುರುಹುಗಳು ಹರಡಿಕೊಂಡಿರುವ ಪಡವನ್ನೂರು - ಬಡಗನ್ನೂರು ಗ್ರಾಮಗಳ ಗಡಿಯಲ್ಲಿರುವ ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಈ ಶಾಲೆ ಇದೆ. ಪಡವನ್ನೂರು, ಬಡಗನ್ನೂರು ಕೋಟಿ ಚೆನ್ನಯರ ಹುಟ್ಟೂರು. ಅವರ ತಾಯಿ ದೇಯಿ ಬೈದೇತಿಯ ಸಮಾಧಿ ಸ್ಥಳವೂ ಇರುವುದು ಇಲ್ಲಿಯೇ. ಕೋಟಿ ಚೆನ್ನಯರ ಜನ್ಮಸ್ಥಳ, ಗೆಜ್ಜೆಗಿರಿ ಮೂಲಸ್ಥಾನಗಳು ಈ ಗ್ರಾಮದಲ್ಲಿವೆ. ಈ ಗ್ರಾಮಗಳಿಗೆ ಅಂಟಿಕೊಂಡು ಶ್ರೀ ಗಜಾನನ ಆಂಗ್ಲಮಾದ್ಯಮ ಶಾಲೆಯಿದೆ.

ಅಷ್ಟ ಅವಳಿಗಳು ಶಾಲೆಯಲ್ಲಿ: ಶಾಲೆಯಲ್ಲಿರುವ ೮ ಅವಳಿಗಳ ಪೈಕಿ ೩ ಜೋಡಿಗಳು ಹುಡುಗರು, ೨ ಜೋಡಿ ಹುಡುಗ ಮತ್ತು ಹುಡುಗಿ ಹಾಗೂ ೩ ಜೋಡಿ ಹುಡುಗಿಯರು. ಹೀಗೆ ೩ ವಿಭಾಗದಲ್ಲಿಯು ಇರುವ ಈ ಪುಟಾಣಿಗಳ ಪೈಕಿ ೨ ಜೋಡಿಗಳು ಒಂದೇ ತರಗತಿಯ ಸಹಪಾಠಿಗಳು ಉಳಿದವರು ಬೇರೆ ತರಗತಿಯಲ್ಲಿ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಸನತ್ ಕುಮಾರ್ ರೈ ಎಂ ಹಾಗೂ ಹರ್ಷಿತಾ ರೈ ದಂಪತಿಯ ಮಕ್ಕಳಾದ ಚರಿತ್ ರೈ ಮತ್ತು ಚಾರ್ವಿಕ್ ರೈ ಅವರು ಪ್ರಿ ಕೆಜಿಯಲ್ಲಿ ಕಲಿಯುತ್ತಿದ್ದಾರೆ. ಮನೋಜ್ ಕುಮಾರ್ ಕೆ. ಮತ್ತು ಪೂಜಿತ ಎಂ.ವಿ. ದಂಪತಿಯ ಮಕ್ಕಳಾದ ಚತುಷ್ಕ್ ಎಂ.ಕೆ. ಮತ್ತು ಚರಿಷ್ಮ ಎಂ.ಕೆ. ಎಲ್‌ಕೆಜಿಯಲ್ಲಿ ಕಲಿಯುತ್ತಿದ್ದಾರೆ. ರಾಜೇಶ್ ಡಿ.ಬಿ. ಮತ್ತು ಸುಹಾಸಿನಿ ದಂಪತಿಯ ಮಕ್ಕಳಾದ ಯಶಸ್ ಡಿ.ಆರ್. ಹಾಗೂ ಶ್ರೇಯಸ್ ಡಿ.ಆರ್. ಅವರು ೧ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆನಂದ ನಾಯ್ಕ್ ಎ. ಮತ್ತು ಪ್ರಮೀಳಾ ಕೆ.ಆರ್. ದಂಪತಿಯ ಮಕ್ಕಳಾದ ವಂಶಿಕ ಎ ಮತ್ತು ವಿಶ್ಮಿಕ ಎ. ಅವರು ೨ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕೆ.ವಿ. ಹೈದರಾಲಿ ಮತ್ತು ಆಯುಷತ್ ಸುಮಯ್ಯ ದಂಪತಿಯ ಮಕ್ಕಳಾದ ಆಸಿಯತ್ ಶಫಾನ ಮತ್ತು ಮರಿಯಂ ಶಿಫಾನ ಅವರು ೩ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ. ಉದಯ ಶೆಟ್ಟಿ ಮತ್ತು ರೂಪಾ ದಂಪತಿಯ ಮಕ್ಕಳಾದ ಅನ್ವಿತ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಅವರು ೫ನೇ ತರಗತಿಯಲ್ಲಿದ್ದಾರೆ. ಸುದೇಶ ಮತ್ತು ಪ್ರಫುಲ್ಲ ದಂಪತಿಯ ಮಕ್ಕಳಾದ ನವ್ಯ ಬಿ. ಮತ್ತು ನಿತಿನ್ ಬಿ. ಅವರು ೫ನೇ ತರಗತಿಯಲ್ಲಿದ್ದಾರೆ. ಮನಮೋಹನ ಎಂ. ಮತ್ತು ಪುಷ್ಪವತಿ ಟಿ. ದಂಪತಿಯ ಮಕ್ಕಳಾದ ಸಾನ್ವಿ ಎಂ.ಪಿ. ಮತ್ತು ಶ್ರಾವ್ಯ ಎಂ.ಪಿ. ಅವರು ೮ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.