ಸಾರಾಂಶ
ಪ್ರಸ್ತುತ ಸಂದರ್ಭದಲ್ಲಿ ಅದ್ಭುತ ಗಾಯಕರು ಹೊರಹೊಮ್ಮುತ್ತಿದ್ದಾರೆ. ಅವರನ್ನು ಬೆಳಕಿಗೆ ತರಲು ಹೆಗಡೆ ಗ್ರುಪ್ ಅದ್ಭುತ ವೇದಿಕೆ ಕಲ್ಪಿಸಿದ್ದು, ಈ ಮೂಲಕ ಹೊಸ ಹೊಸ ಗಾಯಕರು ಹೊರ ಬರಲಿ
ಧಾರವಾಡ: ಹೆಗಡೆ ಗ್ರುಪ್, ವಿಶನ್ ಫೌಂಡೇಶನ್ ಹಾಗೂ ನ್ಯೂಸ್ ಟೈಮ್ ಆಯೋಜಿಸಿದ ಟ್ವಿನ್ ಸಿಟಿ -5ರ ಗ್ರ್ಯಾಂಡ್ ಫಿನಾಲೆಗೆ ಇತ್ತೀಚೆಗೆ ರಂಗಾಯಣದ ಸಾಂಸ್ಕೃತಿಕ ಸಮುಚ್ಛಯದಲ್ಲಿ ನಡೆದ ಆಡಿಶನ್‌ನಲ್ಲಿ ಎಂಟು ಜನ ಯುವ ಗಾಯಕರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಗಾಯಕರು, ಸಂಗೀತಗಾರರಾದ ಶ್ರೀಕಾಂತ ಕುಲಕರ್ಣಿ ಹಾಗೂ ರವಿ ಮೂರೂರ ಅವರ ತೀರ್ಪುಗಾರರ ಸಮ್ಮುಖದಲ್ಲಿ ನಡೆದ ಎರಡು ಹಂತದ ಆಡಿಶನ್‌ನಲ್ಲಿ ಅತ್ಯುತ್ತಮವಾಗಿ ಹಾಡಿದ ಹುಬ್ಬಳ್ಳಿಯ ವೃಂದಾ ಚಿವುಟದ, ಧಾರವಾಡದ ರಮ್ಯಶ್ರೀ ಕುಲಕರ್ಣಿ, ಹುಬ್ಬಳ್ಳಿಯ ಡಾ. ಸಂಜನಾ ಎಸ್.ಸಿ., ಹಾವೇರಿಯ ದೇವೇಂದ್ರ ಕೊಪ್ಪದ, ಕೆಲಗೇರಿಯ ಮಹೇಶ್ವರಿ ಕಲ್ಯಾಣಮಠ, ಚಿಕ್ಕೋಡಿಯ ಸೌಂದರ್ಯ ಕಂಬಳ, ಹುಬ್ಬಳ್ಳಿ ಸಮನ್ವೀತ ಮಠದ ಹಾಗೂ ಗಗನ ಓದಿಸುಮಠ ಅವರನ್ನು ಆಯ್ಕೆ ಮಾಡಲಾಯಿತು. ಈ ಎಂಟು ಜನ ಯುವ ಗಾಯಕರು ಜ. 27ರಂದು ಕರ್ನಾಟಕ ಕಲಾ ಕಾಲೇಜು ಆವರಣದಲ್ಲಿ ನಡೆಯಲಿರುವ ಧಾರವಾಡ ಹಬ್ಬದಲ್ಲಿ ಹಾಡಲಿದ್ದಾರೆ.ಇದಕ್ಕೂ ಮುಂಚೆ ನಡೆದ ವೇದಿಕೆ ಕಾರ್ಯಕ್ರಮವನ್ನು ಮಾಜಿ ಮೇಯರ್ ಈರೇಶ ಅಂಚಟಗೇರಿ ಉದ್ಘಾಟಿಸಿ, ಯಾವ ವಿದ್ಯೆಯೂ ಸರಳವಾಗಿ ಒಲಿಯುವುದಿಲ್ಲ. ಅದರಲ್ಲೂ ಸಂಗೀತ, ಗಾಯನ ಕಲಿಯುವುದು, ಹಾಡುವುದು ತುಂಬ ಕಷ್ಟದ ಅಧ್ಯಯನ. ಒಂದು ರೀತಿಯಲ್ಲಿ ತಪಸ್ಸು ಮಾಡಿದರೆ ಮಾತ್ರ ಒಳ್ಳೆಯ ಸಂಗೀತಗಾರರು, ಗಾಯಕರಾಗಲು ಸಾಧ್ಯ ಎಂದರು.
ಹಿರಿಯ ಗಾಯಕರಾದ ರವಿ ಮೂರೂರ ಮತ್ತು ಶ್ರೀಕಾಂತ ಕುಲಕರ್ಣಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಅದ್ಭುತ ಗಾಯಕರು ಹೊರಹೊಮ್ಮುತ್ತಿದ್ದಾರೆ. ಅವರನ್ನು ಬೆಳಕಿಗೆ ತರಲು ಹೆಗಡೆ ಗ್ರುಪ್ ಅದ್ಭುತ ವೇದಿಕೆ ಕಲ್ಪಿಸಿದ್ದು, ಈ ಮೂಲಕ ಹೊಸ ಹೊಸ ಗಾಯಕರು ಹೊರ ಬರಲಿ ಎಂದು ಹಾರೈಸಿದರು.ಖ್ಯಾತ ವೈದ್ಯ ಡಾ.ಜಗದೀಶ ನಾಯಕ, ಸಂಗೀತ ಕೇವಲ ಮನಕ್ಕೆ ಮಾತ್ರ ಮುದ ನೀಡದೇ ಆರೋಗ್ಯ ವೃದ್ಧಿಸುವ ಶಕ್ತಿ ಅದಕ್ಕಿದೆ.ಈ ನಿಟ್ಟಿನಲ್ಲಿ ಪ್ರತಿಯೋಬ್ಬರು ಸಂಗೀತ ಕೇಳುವ ಅಥವಾ ಹಾಡುವ ರೂಢಿ ಇಟ್ಟುಕೊಳ್ಳಬೇಕು ಎಂಬ ಸಲಹೆ ನೀಡಿದರು.
ಟ್ವಿನ್ ಸಿಟಿ -4ರ ವಿಜೇತರಾದ ಪ್ರಣತಿ ರಾಯ್, ಹೆಗಡೆ ಗ್ರುಪ್‌ನ ಗಿರೀಶ ಹೆಗಡೆ, ಪ್ರಶಾಂತ ಗೊರವರ, ಬಾಸ್ಕೋ ಸಾಲೋಮನ್, ಸತೀಶ ಶಿಂಧೆ, ಸುನೀಲ ಜಾ ಇದ್ದರು. ರೋಹಿತ್ ನಿರೂಪಿಸಿದರು.