ಶೆಟ್ಟರ್ ಕಾಂಗ್ರೆಸ್‍ಗೆ ವಿದಾಯ ಆಯಾರಾಂ ಗಯಾರಾಂ ಅನ್ಕೋತೀವಿ: ಪ್ರಿಯಾಂಕ್

| Published : Jan 26 2024, 01:52 AM IST

ಸಾರಾಂಶ

ಕಾಂಗ್ರೆಸ್ 135 ವರ್ಷಗಳಷ್ಟು ಹಳೆಯ ಪಕ್ಷ. ಅಂದು ಪಕ್ಷಕ್ಕೆ ಯಾವ ನಿಲುವು ಮತ್ತು ಸಿದ್ಧಾಂತಗಳು ಇದ್ದವೋ ಈಗಲೂ ಅದೇ ನಿಲುವು ಸಿದ್ಧಾಂತಗಳ ಮೇಲೆ ಪಕ್ಷ ನಡೆಯುತ್ತಿದೆ. ಘರ್ ವಾಪ್ಸಿ ಹೆಸರಿನಲ್ಲಿ ಯಾರಾದರೂ ಹೋದರೆ ಹೋಗಲಿ. ನಮ್ಮ ಮನೆ ಹೇಗಿದೆಯೋ ಹಾಗೆ ಇರುತ್ತದೆ: ಪ್ರಿಯಾಂಕ್‌ ಖರ್ಗೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಕಾಂಗ್ರೆಸ್ ಪಕ್ಷ ನಿಂತಿಲ್ಲ. ಹೋಗುವವರು ಹೋಗುತ್ತಿರುತ್ತಾರೆ. ಆಯಾ ರಾಮ್ ಗಯಾ ರಾಮ್ ಅನ್ಕೋತೀವಿ ಅಷ್ಟೇ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಮಾಜಿ ಸಿಎಂ, ಎಂಎಲ್‌ಸಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ ಎಂಬುದು ಸುಳ್ಳು ಎಂದರು.

ಬಿಜೆಪಿಯಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಅವರೇ ಖುದ್ದಾಗಿ ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ಅವರು ರಾಜಕೀಯ ಮುತ್ಸದ್ಧಿತನ ನೋಡಿ ಟಿಕೆಟ್ ನೀಡಲಾಗಿತ್ತು. ಬಳಿಕ ವಿಧಾನ ಪರಿಷತ್ ಸದಸ್ಯರನ್ನಾಗಿಯೂ ಮಾಡಲಾಗಿತ್ತು. ಇಷ್ಟೆಲ್ಲಾ ಆದ ನಂತರವೂ ಅವರು ಬಿಜೆಪಿಗೆ ವಾಪಸ್ಸಾಗಿದ್ದಾರೆ ಎಂದರೆ ಯಾಕೆ ಹೋಗಿದ್ದಾರೋ ಗೊತ್ತಿಲ್ಲ ಎಂದರು.

ಕಾಂಗ್ರೆಸ್ 135 ವರ್ಷಗಳಷ್ಟು ಹಳೆಯ ಪಕ್ಷ. ಅಂದು ಪಕ್ಷಕ್ಕೆ ಯಾವ ನಿಲುವು ಮತ್ತು ಸಿದ್ಧಾಂತಗಳು ಇದ್ದವೋ ಈಗಲೂ ಅದೇ ನಿಲುವು ಸಿದ್ಧಾಂತಗಳ ಮೇಲೆ ಪಕ್ಷ ನಡೆಯುತ್ತಿದೆ. ಘರ್ ವಾಪ್ಸಿ ಹೆಸರಿನಲ್ಲಿ ಯಾರಾದರೂ ಹೋದರೆ ಹೋಗಲಿ. ನಮ್ಮ ಮನೆ ಹೇಗಿದೆಯೋ ಹಾಗೆ ಇದೆ ಎಂದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಖಾಲಿ ಆಗಲಿವೆ ಎಂಬ ತಮ್ಮ ಈ ಹಿಂದಿನ ಹೇಳಿಕೆಗೆ ಬದ್ಧರಾಗಿರುವುದಾಗಿ ಹೇಳಿದ ಪ್ರಿಯಾಂಕ್, ನಮ್ಮ ಬಜೆಟ್ ಅಧಿವೇಶನದ ಬಳಿಕ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಕುತೂಹಲ ಮೂಡಿಸಿದರು.ಕೆಲವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿರುತ್ತಾರೆ ಎಂದು ಶೆಟ್ಟರ್ ಹೆಸರು ಪ್ರಸ್ತಾಪಿಸದೆ ಸೂಚ್ಯವಾಗಿ ನುಡಿದ ಪ್ರಿಯಾಂಕ್ ಖರ್ಗೆ, ಲೋಕಸಭಾ ಚುನಾವಣೆಗೆ ನಾವಿನ್ನೂ ಮ್ಯಾಚ್ ಶುರು ಮಾಡಿಲ್ಲ. ಒಮ್ಮೆ ಮ್ಯಾಚ್ ಶುರುವಾದ ಬಳಿಕ ಎಲ್ಲವೂ ಗೊತ್ತಾಗುತ್ತದೆ ಎಂದರು.

ಲಕ್ಷ್ಮಣ ಸವದಿ ಸಹ ಪಕ್ಷ ಬಿಡುತ್ತಾರಂತಲ್ಲ? ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಹೋಗಲಿ ಬಿಡಿ, ಬೇಡ ಅಂದೋರ್ಯಾರು? ಎಂದು ಪ್ರಶ್ನಿಸಿದರು.

ದೇಶದಲ್ಲಿ ಈಗ ಪ್ರಧಾನಿ ಮೋದಿ ಕರೆನ್ಸಿ ನಡೆಯುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕರೆನ್ಸಿ ಕೂಡ ನಡೆಯುತ್ತಿಲ್ಲ. ಮೇಲಾಗಿ, ಆ ಪಕ್ಷದಲ್ಲಿ ಗೊಂದಲವಿದೆ. ಹೀಗಾಗಿ, ಇಂತಹ ರಣನೀತಿಗಳನ್ನು ಆಗಾಗ ಪ್ರದರ್ಶಿಸುತ್ತಿರುತ್ತಾರೆ ಎಂದರು.

ರಾಜಕೀಯದಲ್ಲಿ ನಾವು ಕಲಿಯುವುದು ನಿಂತ ದಿನವೇ ನಮ್ಮ ಕಡೆಯ ದಿನವಾಗಿರುತ್ತದೆ. ಹೀಗಾಗಿ, ನಾವು ಈ ಎಲ್ಲ ವಿದ್ಯಮಾನಗಳಿಂದ ಕಲಿಯಬೇಕಾಗಿದೆ ಎಂದರು.