ಸಾರಾಂಶ
ಬಲಿಷ್ಠ ಭಾರತ ನಿರ್ಮಾಣ ಮಾಡಲು ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರೂ ಪ್ರಜ್ಞಾ ಪೂರ್ವಕವಾಗಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಡ್ಡಾಯ ಮತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಬಲಿಷ್ಠ ಭಾರತ ನಿರ್ಮಾಣ ಮಾಡಲು ಮತದಾನದ ಹಕ್ಕು ಹೊಂದಿರುವ ಪ್ರತಿಯೊಬ್ಬರೂ ಪ್ರಜ್ಞಾ ಪೂರ್ವಕವಾಗಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಡ್ಡಾಯ ಮತದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ದೀಪಕ್ ಪಾಟೀಲ್ ತಿಳಿಸಿದರು.ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನ, ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಶೇ.40 ರಷ್ಟು ವಿದ್ಯಾವಂತ ಮತ್ತು ಪದವಿ ಪಡೆದು ಉನ್ನತ ಸ್ಥಾನದಲ್ಲಿರುವ ಮತದಾರರು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ಚುನಾವಣೆ ದಿನದಂದು ಮತದಾನ ಮಾಡದೆ ಒಂದು ದಿನ ರಜೆ ಸಿಕ್ಕಿತೆಂಬ ಕಾರಣಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ತೆರಳುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ಮತದಾನದ ಹಕ್ಕು ಹೊಂದುವ 18 ವರ್ಷ ಮೇಲ್ಪಟ್ಟ ಯುವ ಸಮುದಾಯ ಯಾವುದೇ ಆಮಿಷಗಳಿಗೆ ಬಲಿಯಾಗದೆ ನಿರ್ಭೀತರಾಗಿ, ಧರ್ಮ, ಜನಾಂಗ, ಜಾತಿ ಮತ ಭಾಷೆ ಅಥವಾ ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಕ್ಕೊಳಗಾಗದೆ ಮತಚಲಾಯಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಅಪರ ಸಿವಿಲ್ ನ್ಯಾಯಾಧೀಶ ಯೋಗೇಶ್ ಮಾತನಾಡಿ, ವಿಶ್ವದಲ್ಲಿಯೇ ಅತ್ಯಧಿಕ ಸಂಖ್ಯೆಯ ಯುವ ಶಕ್ತಿ ಹೊಂದಿರುವ ಭಾರತ ದೇಶದ ಸರ್ವತೋಮುಖ ಅಭಿವೃದ್ಧಿಗೆ ಯುವ ಸಮುದಾಯದ ಪ್ರಾತಿನಿಧ್ಯ ಅತ್ಯಂತ ಪ್ರಮುಖವಾದದ್ದು. ಆದರೆ, ಪ್ರಸ್ತುತ ಚುನಾವಣೆ ನಡೆಸುವ ರೀತಿ ಗಮನಿಸಿದರೆ ಮತದಾನ ಪ್ರತಿಜ್ಞಾವಿಧಿಯ ತದ್ವಿರುದ್ಧವಾಗಿ ಚುನಾವಣೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ಸಿವಿಲ್ ನ್ಯಾಯಾಧೀಶ ಕೆ.ಪಿ. ಸಿದ್ದಪ್ಪಾಜಿ ರಾಷ್ಟ್ರೀಯ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೆ.ಕೆ. ರಮೇಶ್‌ಗೌಡ ಮಾತನಾಡಿದರು. ತಹಸೀಲ್ದಾರ್ ಆರ್. ನಯೀಂ ಉನ್ನೀಸಾ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಉತ್ತಮ ರೀತಿಯಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದ ನಾಲ್ವರು ಅಧಿಕಾರಿಗಳನ್ನು ತಾಲೂಕು ಆಡಳಿತದ ವತಿಯಿಂದ ಗೌರವಿಸಲಾಯಿತು.
ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಆರ್. ಶ್ರೀದೇವಿ, ಅಪರ ಸರ್ಕಾರಿ ವಕೀಲ ಪಿ.ಸಿ. ಮಂಜುನಾಥ್, ತಾಪಂ ಇಓ ಚಂದ್ರಮೌಳಿ, ಬಿಇಒ ಎಚ್.ಜಿ. ಸುರೇಶ್, ನ್ಯಾಯಾಲಯದ ಸೋನುಮೂರ್ತಿ, ರಮೇಶ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ಸರ್ಕಾರಿ ಪದವಿಪೂರ್ವ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಇದ್ದರು.