ಕುಡಿಯುವ ನೀರನ್ನು ಸರಿಯಾಗಿ ಪೂರೈಸಬೇಕು. ಇಲ್ಲವಾದರೆ ನಿಮ್ಮ ನೆಲ್ಲಿಗಳನ್ನು ಕಿತ್ತುಕೊಂಡು ಹೋಗಿ ಎಂದು ಪಟ್ಟಣದ ಶಿವಾನಂದ ಬಡಾವಣೆಯ ನಾಗರಿಕರು ನೀರುಗಂಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಟ್ಟಣ ಪಂಚಾಯಿತಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿಗೆ ಮನವಿ ಮಾಡಿದ್ದಾರೆ.

- ನ್ಯಾಮತಿ ಪಪಂ ಬಳಿ ಪ್ರತಿಭಟನೆಯಲ್ಲಿ ಮುಖ್ಯಾಧಿಕಾರಿಗೆ ಒತ್ತಾಯ

- - -

ನ್ಯಾಮತಿ: ಕುಡಿಯುವ ನೀರನ್ನು ಸರಿಯಾಗಿ ಪೂರೈಸಬೇಕು. ಇಲ್ಲವಾದರೆ ನಿಮ್ಮ ನೆಲ್ಲಿಗಳನ್ನು ಕಿತ್ತುಕೊಂಡು ಹೋಗಿ ಎಂದು ಪಟ್ಟಣದ ಶಿವಾನಂದ ಬಡಾವಣೆಯ ನಾಗರಿಕರು ನೀರುಗಂಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪಟ್ಟಣ ಪಂಚಾಯಿತಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿಗೆ ಮನವಿ ಮಾಡಿದರು.

ಪಟ್ಟಣದಲ್ಲಿ ಜಲಜೀವನ್‌ ಮಿಷನ್‌ ಯೋಜನೆಯಡಿ ನಿವಾಸಿಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ನಲ್ಲಿಗಳಲ್ಲಿ ನೀರು ರಭಸವಾಗಿ ಬರುತ್ತಿಲ್ಲ. ನೀರುಗಂಟಿ ಬಳಿ ಈ ಬಗ್ಗೆ ಪ್ರಶ್ನಿಸಿದರೂ ಸರಿಪಡಿಸದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿ ಮಹಿಳೆಯರು ಖಾಲಿ ಬಿಂದಿಗೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದರು.

ಪಟ್ಟಣದಲ್ಲಿ ಈ ಹಿಂದೆ ಕುಡಿಯುವ ನೀರಿನ ಬವಣೆ ತಪ್ಪಿಸುವ ಸಲುವಾಗಿ ತಾಲೂಕಿನ ಗೋವಿನಕೋವಿ ಬಳಿಯ ತುಂಗಭದ್ರಾ ನದಿಯಿಂದ ಬಹುಗ್ರಾಮ ಯೋಜನೆಯಡಿ ನ್ಯಾಮತಿ, ಸುರಹೊನ್ನೆ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿತ್ತು. ವಾರದಲ್ಲಿ ಒಂದು ದಿನಕ್ಕೆ ನೀರು ನೀಡಿದರೂ ತೊಂದರೆ ಆಗುತ್ತಿರಲಿಲ್ಲ. ಆದರೆ, ಜಲಜೀವನ್‌ ಮಿಷನ್‌ ಯೋಜನೆಯಡಿ 2 ತಿಂಗಳಿಂದ ನೀರು ಸರಬರಾಜು ಮಾಡುತ್ತಿರುವುದರಿಂದ ನಲ್ಲಿಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಕೆಲಸ ಕಾರ್ಯಗಳ ಬಿಟ್ಟುಬಂದು ನೀರಿಗಾಗಿ ಕಾಯುವಂತಾಗಿದೆ. ಇದರಿಂದ ಸಮಯ ಹಾಳಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ನೀರುಗಂಟಿಗಳು ಮೇಲಾಧಿಕಾರಿಗಳನ್ನು ಕೇಳಿ, ಅವರನ್ನು ಕೇಳಿ, ಇವರನ್ನು ಕೇಳಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಬಡಾವಣೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದಲ್ಲಿ ಆಗಿರುವ ನೀರಿನ ಸಮಸ್ಯೆ ಸರಿಪಡಿಸಬೇಕು. ಇಲ್ಲವಾದರೆ ನಲ್ಲಿಗಳನ್ನೇ ಕಿತ್ತು ತಂದು ನಾವೇ ಪಂಚಾಯಿತಿಯವರಿಗೆ ನೀಡುತ್ತೇವೆ. ಪಟ್ಟಣ ಪಂಚಾಯಿತಿ ಮುಂದೆ ಧರಣಿಯನ್ನೂ ಕೂರುವುದಾಗಿ ಎಚ್ಚರಿಸಿದರು. ಬಳಿಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪ್ರಜಾ ಪರಿವರ್ತನೆ ವೇದಿಕೆಯ ಟೌನ್‌ ಅಧ್ಯಕ್ಷ ಜಗದೀಶ ಬಿ., ಮಾಜಿ ಗ್ರಾಪಂ ಸದಸ್ಯ ಅಂಜನಪ್ಪ, ಡಿಎಸ್‌ಎಸ್‌ ಹರೀಶ್‌, ಶಾಂತಪ್ಪ, ಚಂದ್ರು, ಸಿದ್ದಮ್ಮ, ರೇಣುಕಮ್ಮ, ಹಸೀನಮ್ಮ, ಗೌರಮ್ಮ, ಬದ್ರಿನ್ನುಸ, ಚಂದ್ರಮ್ಮ, ತಿಮ್ಮೇಶ, ಈರಣ್ಣ, ಎ.ಕೆ.ಚಂದ್ರು, ಪುನೀತ್‌, ಮನೋಜ, ಸುನೀಲ, ಚನ್ನೇಶ, ಪ್ರೀತಮ್‌ ಮತ್ತಿತರರಿದ್ದರು.

- - -

(** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-ಚಿತ್ರ:

ನ್ಯಾಮತಿ ಪಟ್ಟಣದ ಶಿವಾನಂದಪ್ಪ ಬಡಾವಣೆ ನಿವಾಸಿಗಳು ಕುಡಿಯುವ ನೀರು ಸರಬರಾಜು ಅವ್ಯವಸ್ಥೆ ಸರಿಪಡಿಸುವಂತೆ ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.